ಶಿರಸಿ (ಉತ್ತರಕನ್ನಡ): ಶಿರಸಿಯ ಖ್ಯಾತ ಆಯುರ್ವೇದ ವೈದ್ಯ ಡಾ. ರವಿಕಿರಣ ಪಟವರ್ಧನ ಕಳೆದ ಜೂನ್ ಮೊದಲ ವಾರದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಶಿರಸಿಯಲ್ಲಿನ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ಉಲ್ಲೇಖಿಸಿ ಪತ್ರ ಬರೆದಿದ್ದರು. ಜೊತೆಗೆ ದರವನ್ನು ಕಡಿಮೆ ಮಾಡಲು ಸೂಕ್ತ ಮಾರ್ಗದ ಮಾಹಿತಿಯನ್ನೂ ನೀಡಿದ್ದರು. ಸದರಿ ವಿಷಯವನ್ನು ಪೆಟ್ರೋಲಿಯಂ ಸಚಿವಾಲಯಕ್ಕೆ ವರ್ಗಾಯಿಸಲಾಗಿದೆ ಎಂಬ ಉತ್ತರ ಹಣಕಾಸು ಸಚಿವಾಲಯದಿಂದ ಬಂದಿತ್ತು.
ಪ್ರಸ್ತುತ ಇಂಡಿಯನ್ ಆಯಿಲ್ ಕಂಪನಿಯಿಂದ ಡಾ. ರವಿಕಿರಣ ಪಟವರ್ಧನ ಅವರಿಗೆ ಪ್ರತ್ರ ಬಂದಿದೆ. ಅದರಲ್ಲಿ ಡಾ. ಪಟವರ್ಧನ್ ಬರೆದ ಪತ್ರದ ಸಾರಾಂಶವನ್ನು ಉಲ್ಲೇಖಿಸಿ, ಮಂಗಳೂರಿನಿಂದ ಶಿರಸಿಗೆ ಬರುತ್ತಿದ್ದ ಪೆಟ್ರೋಲ್, ಡೀಸೆಲ್ ಬದಲಾಗಿ ಹುಬ್ಬಳ್ಳಿಯಿಂದ ಸರಬರಾಜು ಮಾಡಲಾಗುವುದು ಎಂಬ ಮಾಹಿತಿ ನೀಡಿದ್ದಾರೆ. ಇದರಿಂದ ತೈಲ ದರ ಇಳಿಕೆ ಆಗಿದೆ.
ಇದಕ್ಕೂ ಮೊದಲು ಶಿರಸಿ ರಾಜ್ಯದಲ್ಲೇ ಅತಿ ಹೆಚ್ಚು ಪೆಟ್ರೋಲ್ ದರ ಹೊಂದಿರುವ ಸ್ಥಳ ಎಂಬ ಅಪಖ್ಯಾತಿ ಹೊಂದಿತ್ತು. ಅದಕ್ಕೆ ಕಾರಣ ಮುಖ್ಯವಾಗಿ ಮಂಗಳೂರು ವಲಯದಿಂದ ದರ ನಿಗದಿ ಆಗುವುದಾಗಿತ್ತು. ಆದರೆ ಈಗ ಹುಬ್ಬಳ್ಳಿ ವಲಯದಿಂದ ದರ ನಿಗದಿಯಾಗುತ್ತಿದ್ದು, ಆ ಮೂಲಕ ಶಿರಸಿಯಲ್ಲಿ ಅಂದಾಜು ಪೆಟ್ರೋಲ್ ಪ್ರತಿ ಲೀಟರ್ಗೆ ರೂ.1.19 ಮತ್ತು ಡೀಸೆಲ್ ರೂ. 1.01 ಗಳಷ್ಟು ಕಡಿಮೆಯಾಗಲಿದೆ. ಇದಕ್ಕಾಗಿ ಕರ್ನಾಟಕ ಪೆಟ್ರೋಲ್ ಡೀಲರ್ಸ್ ಅಸೋಸಿಯೇಷನ್ ಸಹ ಪ್ರಯತ್ನಿಸಿತ್ತು. ಈಗ ಸಫಲವಾಗಿದೆ.
ಇದನ್ನೂ ಓದಿ: ತೆಲಂಗಾಣಕ್ಕೆ ರಾಯಚೂರು ಸೇರ್ಪಡೆ ಬಗ್ಗೆ ಕೆಸಿಆರ್ ಹೇಳಿಕೆ ರಾಜಕೀಯ ಪ್ರೇರಿತ: ಸಿಎಂ ಬೊಮ್ಮಾಯಿ
ಒಟ್ಟಾರೆಯಾಗಿ ಕೇಂದ್ರ ಸರ್ಕಾರದ ತ್ವರಿತ ಪ್ರತಿಕ್ರಿಯೆ ನೀತಿಯಿಂದ ಸರ್ಕಾರಕ್ಕೆ ಹಾಗೂ ಜನರಿಗೆ ಆಗುತ್ತಿದ್ದ ಹೊರೆ ತಪ್ಪಿದಂತಾಗಿದೆ. ಇದೇ ರೀತಿ ಸಾಮಾಜಿಕ ಸ್ಪಂದನೆ ಮುಂದುವರೆಯಲಿ ಎನ್ನುವುದು ಜನಸಾಮಾನ್ಯರ ಆಶಯವಾಗಿದೆ.