ಕಾರವಾರ: ರಾಜ್ಯ ಸರ್ಕಾರವು ಶಕ್ತಿ ಯೋಜನೆ ಜಾರಿಗೊಳಿಸಿದೆ. ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕಾಗಿ ಅವಕಾಶ ಮಾಡಿಕೊಡಲಾಗಿದೆ. ಸದ್ಯ ಶಕ್ತಿ ಯೋಜನೆಗೆ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಇದರ ಬಿಸಿ ಟೆಂಪೋ ಚಾಲಕರು ಹಾಗೂ ನಿರ್ವಾಹಕರಿಗೆ ಜೋರಾಗಿಯೇ ತಟ್ಟಿದೆ. ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಹಿನ್ನೆಲೆ ಬಸ್‌ಗಳೆಲ್ಲವೂ ತುಂಬಿ ತುಳುಕುತ್ತಿವೆ. ಖಾಸಗಿ ವಾಹನಗಳಾದ ಟೆಂಪೋಗಳು ಇದೀಗ ಪ್ರಯಾಣಿಕರಿಲ್ಲದೇ ಖಾಲಿ ಖಾಲಿ ಹೊಡೆಯುವಂತಾಗಿದೆ.
ಇದನ್ನೂ ಓದಿ: ಸರ್ಕಾರಿ ಬಸ್ನಲ್ಲಿ ಸೀಟ್ಗಾಗಿ ನಾರಿಯರ ಕಿತ್ತಾಟ: ವೈರಲ್ ವಿಡಿಯೋ
ಹೌದು, ರಾಜ್ಯದ ಕಾಂಗ್ರೆಸ್ ಸರ್ಕಾರ ತಾನು ಕೊಟ್ಟ ಮಾತಿನಂತೆ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ರಾಜ್ಯಾದ್ಯಂತ ಉಚಿತ ಪ್ರಯಾಣದ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಿ ಬೆನ್ನುತಟ್ಟಿಕೊಳ್ಳುತ್ತಿದೆ. ಆದರೆ, ಇದರಿಂದ ಉತ್ತರಕನ್ನಡ ಜಿಲ್ಲೆಯಲ್ಲಿ ಟೆಂಪೋ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಪ್ರತಿನಿತ್ಯ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಟೆಂಪೋಗಳು ಖಾಲಿ ಖಾಲಿ ಹೊಡೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಮೂರು ಸಾವಿರಕ್ಕೂ ಅಧಿಕ ಟೆಂಪೋಗಳಿದ್ದು, ಗುಡ್ಡಗಾಡು ಪ್ರದೇಶವಾಗಿರುವ ಜಿಲ್ಲೆಯ 1,500ಕ್ಕೂ ಅಧಿಕ ಹಳ್ಳಿಗಳಲ್ಲಿ ಸಂಚರಿಸುತ್ತಿವೆ. ಆದರೆ, ಸರ್ಕಾರದ ಉಚಿತ ಪ್ರಯಾಣದ ಯೋಜನೆಯಿಂದ ಮಹಿಳಾ ಪ್ರಯಾಣಿಕರನ್ನೇ ಹೆಚ್ಚು ಅವಲಂಬಿಸಿದ್ದ ಟೆಂಪೋಗಳಲ್ಲಿ ಇದೀಗ ಬೆರಳೆಣಿಕೆಯ ಪ್ರಯಾಣಿಕರಷ್ಟೇ ಸಂಚರಿಸುವಂತಾಗಿದೆ. ಇದರಿಂದಾಗಿ ಟೆಂಪೋಗಳನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಚಾಲಕರು, ನಿರ್ವಾಹಕರಿಗೆ ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಇದನ್ನೂ ಓದಿ: ಸರ್ಕಾರಿ ಬಸ್‌ಗಳಲ್ಲಿ 'ಶಕ್ತಿ' ಪ್ರದರ್ಶನ: ಶಾಲಾ, ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳ ಹರಸಾಹಸ
ಜಿಲ್ಲೆಯಲ್ಲಿವೆ 510 ಕೆಎಸ್ಆರ್‌ಟಿಸಿ ಬಸ್‌ಗಳು: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು 1 ಲಕ್ಷದ 75 ಸಾವಿರ ಮಹಿಳಾ ಪ್ರಯಾಣಿಕರಿದ್ದು, ಜಿಲ್ಲೆಯಾದ್ಯಂತ 510 ಕೆಎಸ್ಆರ್‌ಟಿಸಿ ಬಸ್‌ಗಳು ಸಂಚರಿಸುತ್ತವೆ. ಜಿಲ್ಲೆಯ 1,73,937 ಕಿ. ಮೀ ವ್ಯಾಪ್ತಿಯಲ್ಲಿರುವ 1,034 ಹಳ್ಳಿಗಳಲ್ಲಿ 991 ಹಳ್ಳಿಗಳಿಗೆ ಸಾರಿಗೆ ಬಸ್ ವ್ಯವಸ್ಥೆ ಇದೆ. ಉಳಿದ ಹಳ್ಳಿಗಳಿಗೆ ಖಾಸಗಿ ವಾಹನಗಳು ಸಂಚರಿಸುತ್ತಿವೆ. ಟೆಂಪೋಗಳು ಪ್ರತಿವರ್ಷ ರಸ್ತೆ ತೆರಿಗೆ, ಎರಡು ವರ್ಷಕ್ಕೊಮ್ಮೆ ವಾಹನ ದೃಢತೆ ತಪಾಸಣೆ ಮಾಡಿಸಬೇಕು. ಇದೆಲ್ಲಕ್ಕೂ ಪ್ರಯಾಣಿಕರ ಹಣವೇ ಮೂಲವಾಗಿದ್ದು, ವಿವಿಧೆಡೆ ಸಾಲ ಮಾಡಿ ಟೆಂಪೋಗಳನ್ನು ಖರೀದಿಸಲಾಗಿದೆ. ಪ್ರತಿನಿತ್ಯ ಕೆಲಸಕ್ಕೆ ತೆರಳುವ ಮಹಿಳಾ ಪ್ರಯಾಣಿಕರು ಹೆಚ್ಚಿದ್ದು, ಆದ್ರೆ ಖಾಸಗಿ ವಾಹನಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಇಳಿಕೆಯಿದೆ. ಖಾಸಗಿ ವಾಹನಗಳನ್ನೇ ನಂಬಿಕೊಂಡಿರುವವರಿಗೆ ಸರ್ಕಾರ ನೆರವು ನೀಡಬೇಕು ಎಂದು ಖಾಸಗಿ ವಾಹನ ಚಾಲಕರು ಮನವಿ ಮಾಡಿದ್ದಾರೆ.
ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಯೋಜನೆಯಿಂದ ಟೆಂಪೋ ನಂಬಿ ಬದುಕುತ್ತಿದ್ದವರ ಹೊಟ್ಟೆಗೆ ಬರೆ ಬಿದ್ದಂತಾಗಿದೆ. ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ಸಾರಿಗೆ ವಲಯದ ಕಾರ್ಮಿಕರಿಗೆ ಸರ್ಕಾರವು ಗಮನಹರಿಸಿ ನೆರವು ನೀಡಬೇಕು ಎನ್ನುವುದು ಖಾಸಗಿ ವಾಹನ ಚಾಲಕರ ಒತ್ತಾಯವಾಗಿದೆ.
ಇದನ್ನೂ ಓದಿ: Viral video: ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಪವಾಡ ಸದೃಶ್ಯ ರೀತಿ ಮಹಿಳೆ ಪಾರು