ಕಾರವಾರ: ಸಾಗರಮಾಲಾ ಯೋಜನೆಯಡಿ ಎರಡನೇ ಹಂತದ ಬಂದರು ವಿಸ್ತರಣೆ ವಿರೋಧಿಸಿ ನಡೆಯುತ್ತಿರುವ ಹೋರಾಟ ರಾಜಕೀಯ ಕಚ್ಚಾಟಕ್ಕೆ ಕಾರಣವಾಗಿದೆ. ಮುಗ್ಧ ಮೀನುಗಾರರನ್ನು ಮಾಜಿ ಶಾಸಕರು ದಿಕ್ಕು ತಪ್ಪಿಸುತ್ತಿದ್ದಾರೆ ಎಂಬ ಶಾಸಕಿ ರೂಪಾಲಿ ನಾಯ್ಕ ಆರೋಪಕ್ಕೆ ಮಾಜಿ ಶಾಸಕ ಸತೀಶ್ ಸೈಲ್ ತಿರುಗೇಟು ನೀಡಿದ್ದಾರೆ.
ಕಾರವಾರದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾಗರಮಾಲ ಯೋಜನೆಯಡಿ ಬಂದರು ಅಭಿವೃದ್ಧಿ ಕಾಮಗಾರಿಯನ್ನು ಈ ಹಿಂದೆ ಉದ್ಘಾಟನೆ ಮಾಡಿದ ನನ್ನ ವಿರುದ್ಧ ಶಾಸಕಿ ರೂಪಾಲಿ ನಾಯ್ಕ ಹಾಗೂ ಅವರ ಬೆಂಬಲಿಗರು ನಿರಂತರ ಆರೋಪ ಮಾಡುತ್ತಿದ್ದಾರೆ. ಆದರೆ ನಗರದಲ್ಲಿ ಬಂದ್ಗೆ ಕರೆ ನೀಡಿದ್ದ ಕಾರಣ ಸುಮ್ಮನಿದ್ದೆ. ಇದು ಕೇಂದ್ರ ಸರ್ಕಾರದ ಯೋಜನೆ, ನಾನು ಅಂದೇ ಈ ಯೋಜನೆಯನ್ನು ವಿರೋಧ ಮಾಡಿದ್ದೇನೆ. ಇದು ಯಾವುದನ್ನು ತಿಳಿದುಕೊಳ್ಳದ ಶಾಸಕಿ, ಬೆಂಗಳೂರಿನಲ್ಲಿ ನನ್ನ ವಿರುದ್ಧ ಸಚಿವರುಗಳಿಗೆ ಸುಳ್ಳು ಮಾಹಿತಿ ನೀಡಿ ತಪ್ಪು ಕಲ್ಪನೆ ಬರುವ ಹಾಗೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಕುಳಿತು ತಪ್ಪು ಮಾಹಿತಿ ನೀಡುವುದನ್ನು ಬಿಟ್ಟು, ಸ್ಥಳದಲ್ಲಿ ಬಂದು ಮಾತನಾಡಲಿ ಎಂದು ಸವಾಲು ಹಾಕಿದ್ದಾರೆ.
ಇದು ಕೇಂದ್ರ ಸರ್ಕಾರದ ಯೋಜನೆ. ಇವರು ಪ್ರದರ್ಶಿಸುತ್ತಿರುವ ಆಹ್ವಾನ ಪತ್ರದಲ್ಲಿ ಮುಖ್ಯ ಅತಿಥಿಯಾಗಿ ಸಂಸದ ಅನಂತಕುಮಾರ್ ಹೆಸರೇ ಇತ್ತು. ಅಲ್ಲದೆ ಅಂದಿನ ಕೇಂದ್ರ ಸಚಿವರಾಗಿದ್ದ ನಿತಿನ್ ಗಡ್ಕರಿ, ಚುನಾವಣಾ ಭಾಷಣದಲ್ಲಿ ಬಂದರು ಅಭಿವೃದ್ಧಿ ಮಾಡಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿಕೆ ನೀಡಿದ್ದರು. ಆದರೆ ಈ ಬಗ್ಗೆ ಯಾರು ಮಾತನಾಡುತ್ತಿಲ್ಲ. ಇದೀಗ ಮೀನುಗಾರರಿಗೆ ನಾನೇ ಹೇಳಿ ಮಾಡಿಸಿದ್ದೇನೆ ಎಂದು ಶಾಸಕಿ ಆರೋಪಿಸಿದ್ದಾರೆ ಎಂದರು.
ಅಸ್ನೋಟಿಕರ್ ಬೆಂಬಲಿಗರ ನಿಲುವು ತಿಳಿದುಕೊಳ್ಳಲಿ:
ನಿನ್ನೆ ನಡೆದ ಪ್ರತಿಭಟನೆ ವೇಳೆ ಮಾಜಿ ಸಚಿವ ಆನಂದ್ ಅಸ್ನೋಟಿಕರ್, ಯೋಜನೆ ಜಾರಿಗೆ ಮಾಜಿ ಶಾಸಕರು ಕಾರಣ ಎಂದು ಕೂಗಾಡಿದ್ದಾರೆ. ಆದರೆ ತಮ್ಮದೇ ಬೆಂಬಲಿಗರಿರುವ ಒಂದು ಯುನಿಯನ್ ಸಾಗರಮಾಲ ಯೋಜನೆ ಆಗಬೇಕು ಎಂದು ಒತ್ತಾಯಿಸಿದೆ. ಮೊದಲು ಅದನ್ನು ತಿಳಿದುಕೊಳ್ಳಲಿ. ನಾನು ಜನ ವಿರೋಧಿ ಯೋಜನೆಗೆ ಬೆಂಬಲಿಸಿಲ್ಲ, ಈ ಹಿಂದೆ ಶಾಸಕನಾಗಿದ್ದಾಗಲೂ ಈ ಯೋಜನೆಯನ್ನು ಸಂಪೂರ್ಣವಾಗಿ ವಿರೋಧಿಸಿದ್ದೇನೆ ಎಂದು ಹೇಳಿದ್ದಾರೆ.