ಕಾರವಾರ: ಕರ್ನಾಟಕದಿಂದ ಗೋವಾ ರಾಜ್ಯಕ್ಕೆ ತೆರಳುವ ಬಾಡಿಗೆ ವಾಹನ ಚಾಲಕರಿಗೆ ಆಗುತ್ತಿರುವ ಮಾನಸಿಕ ಕಿರುಕುಳ ತಪ್ಪಿಸುವಂತೆ ರಾಜ್ಯ ಸರ್ಕಾರವನ್ನು ಮಾಜಿ ಶಾಸಕ ಸತೀಶ್ ಸೈಲ್ ಆಗ್ರಹಿಸಿದ್ದಾರೆ.
ಗಡಿ ಭಾಗದಲ್ಲಿ ಟ್ಯಾಕ್ಸಿ ಚಾಲಕರ ಸಮಸ್ಯೆಗಳೇನು?
ಕರ್ನಾಟಕ ಗೋವಾ ಗಡಿಭಾಗವಾದ ಮಾಜಾಳಿ ಚೆಕ್ ಪೋಸ್ಟ್ ಬಳಿ ಟ್ಯಾಕ್ಸಿ ಚಾಲಕರೊಂದಿಗೆ ತೆರಳಿದ ಅವರು, ಕೋವಿಡ್ ಮಹಾಮಾರಿಯಿಂದಾಗಿ ಗೋವಾ ರಾಜ್ಯ ಗಡಿಗಳಲ್ಲಿ ಅಂತರ್ ರಾಜ್ಯ ವಾಹನ ತಿರುಗಾಟಕ್ಕೆ ಅವೈಜ್ಞಾನಿಕವಾಗಿ ನಿರ್ಬಂಧ ವಿಧಿಸಲಾಗಿದೆ. ನಿತ್ಯ ಗೋವಾದೊಂದಿಗೆ ಸಂಪರ್ಕ ಸಾಧಿಸುವ ಕಾರವಾರದ ವಾಹನ ಚಾಲಕರು ಪಡಬಾರದ ಕಷ್ಟ ಪಡುತ್ತಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ಮುಕ್ತವಾಗಿರುವುದರಿಂದ ಸ್ಥಳೀಯ ಪ್ರಯಾಣಿಕರು ಆರ್ಟಿ-ಪಿಸಿಆರ್ ನೆಗೆಟಿವ್ ರಿಪೋರ್ಟ್ ಪಡೆದುಕೊಂಡು ವಿಮಾನ ನಿಲ್ದಾಣಕ್ಕೆ ಗೋವಾ ಗಡಿ ಮುಖಾಂತರ ಯಾವುದೇ ಅಡೆತಡೆ ಇಲ್ಲದೆ ಪ್ರಯಾಣಿಸಬಹುದು. ಆದರೆ, ಅವರನ್ನು ತಮ್ಮ ಕಾರಿನಲ್ಲಿ ಕರೆದೊಯ್ಯುತ್ತಿರುವ ಸ್ಥಳೀಯ ಚಾಲಕರಿಗೂ ಗೋವಾ ರಾಜ್ಯ ಪ್ರವೇಶಿಸಲು ಆರ್ಟಿ-ಪಿಸಿಆರ್ ರಿಪೋರ್ಟ್ ತೋರಿಸಲು ಗಡಿಯಲ್ಲಿ ಒತ್ತಾಯ ಮಾಡುತ್ತಿದ್ದಾರೆ ಎಂದರು.
'ಕಾನೂನು ಸರಳೀಕರಣ ಆಗಬೇಕು'
ಗೋವಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಜ್ಯದ ಪ್ರಯಾಣಿಕರನ್ನು ಕರೆತರಲು ಇಲ್ಲಿಯ ವಾಹನಗಳು ಗೋವಾ ರಾಜ್ಯಕ್ಕೆ ತೆರಳುವಂತಿಲ್ಲ. ಅಲ್ಲಿಯ ವಾಹನ ಚಾಲಕರು ಇಲ್ಲಿಗೆ ಬರುವುದಿಲ್ಲ. ಇದರಿಂದ ಪ್ರಯಾಣಿಕರ ಕಷ್ಟ ಕೇಳುವವರಿಲ್ಲದಂತಾಗಿದೆ. ಸ್ಥಳೀಯ ಚಾಲಕರು ಗೋವಾ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಿ, ಕೆಲವೇ ಗಂಟೆಗಳಲ್ಲಿ ಕಾರವಾರಕ್ಕೆ ತಿರುಗಿ ಬರುತ್ತಾರೆ. ಆದರೆ, ಪ್ರತಿದಿನ ಆರ್ಟಿ-ಪಿಸಿಆರ್ ಪರೀಕ್ಷೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಪ್ರಯಾಣಿಕರ ವಿಮಾನ ಅಥವಾ ರೈಲು ಪ್ರಯಾಣದ ಟಿಕೆಟ್ನ ಆಧಾರದ ಮೇಲೆ ಪ್ರಯಾಣಿಸುವ ವಾಹನ ಚಾಲಕರಿಗೂ ಗೋವಾ ರಾಜ್ಯ ಪ್ರವೇಶಿಸಲು ಕಾನೂನು ಸರಳೀಕರಣ ಆಗಬೇಕಾಗಿದೆ. ಆದ್ದರಿಂದ ತಾವು ಈ ಕುರಿತು ಗೋವಾ ರಾಜ್ಯ ಸರ್ಕಾರಡೊಡನೆ ಮಾತನಾಡಿ ಈಗಿರುವ ನಿಯಮ ಸಡಿಲಿಸಿ, ಸ್ಥಳೀಯ ಚಾಲಕರಿಗೆ ಕಳೆದ ವರ್ಷ ಇದ್ದ ನಿಯಮವನ್ನೇ ಈ ವರ್ಷವೂ ಅನುಸರಿಸಲು ಸೂಚಿಸುವಂತೆ ರಾಜ್ಯಸರ್ಕಾಕ್ಕೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ರಸ್ತೆ ಬದಿ ಗುಡಿಸಲಿಗೆ ಡಿಕ್ಕಿ ಹೊಡೆದ ಲಾರಿ... ಒಂದೇ ಕುಟುಂಬದ ನಾಲ್ವರು ಸಾವು