ಕಾರವಾರ: ತಾಲೂಕಿನಲ್ಲಿ ಭಾಷಾ ವಿವಾದದ ಕಿಚ್ಚು ತಣ್ಣಗಾಗಿದೆ. ಆದ್ರೆ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹೇಳಿಕೆಯಿಂದ ಮತ್ತೆ ವಿವಾದದ ಕಿಡಿ ಹೊತ್ತಿದೆ. ಕೊಂಕಣಿ ಭಾಷೆ ಪರವಾಗಿ ಬ್ಯಾಟ್ ಬಿಸಿದ ಅಸ್ನೋಟೆಕರ್, ಕಾರವಾರ ಭಾಗದಲ್ಲಿ ಕೊಂಕಣಿ ಭಾಷೆಯಲ್ಲಿ ಬೋರ್ಡ್ ಹಾಕಿದರೆ ಅದರಲ್ಲಿ ತಪ್ಪೇನಿದೆ?, ನಮ್ಮ ಬೆಂಬಲ ಕೊಂಕಣಿಗೆ ಅಂತಾ ಮತ್ತೆ ಭಾಷಾ ವಿವಾದಕ್ಕೆ ಗುರಿಯಾಗಿದ್ದಾರೆ. ಇದಕ್ಕೆ ಸಿಡಿದೆದ್ದ ಕನ್ನಡಿಗರು ಕರ್ನಾಟಕದಲ್ಲಿ ಕನ್ನಡ ಭಾಷೆ ಮುಖ್ಯ ಎಂದು ಅಸ್ನೋಟಿಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ನಗರಸಭೆ ಮಾಡಿದ ಎಡವಟ್ಟಿನಿಂದ ಭಾಷಾ ವಿವಾದ ಉಂಟಾಗಿತ್ತು. ಆಗ ನಗರಸಭೆ ನಗರದ ಪ್ರಮುಖ ಬೋರ್ಡ್ಗಳಿಗೆ ದೇವನಾಗರಿ ಲಿಪಿಯಲ್ಲಿ ಕೊಂಕಣಿ ಭಾಷೆಯನ್ನ ಬಳಸಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿತ್ತು. ಆ ಸಂದರ್ಭದಲ್ಲಿ ಕನ್ನಡ ಪರ ಹೋರಾಟಗಾರರು ದೇವನಾಗರಿ ಲಿಪಿಯುಳ್ಳ ಕೊಂಕಣಿ ಭಾಷೆ ಬೋರ್ಡ್ಗಳಿಗೆ ಮಸಿ ಬಳೆದು ಆಕ್ರೋಶ ವ್ಯಕ್ತಪಡಿಸಿದ್ದರು. ಆಗ ಕನ್ನಡಿಗರ ಒತ್ತಡಕ್ಕೆ ಮಣಿದ ಜಿಲ್ಲಾಡಳಿತ ಮತ್ತು ನಗರಸಭೆ ಕೊಂಕಣಿ ಭಾಷೆ ಬೋರ್ಡ್ಗಳಿಗೆ ಬಣ್ಣ ಬಳೆಯುವ ಮೂಲಕ ವಿವಾದಕ್ಕೆ ತೆರೆ ಎಳೆದಿತ್ತು.
ಇದನ್ನೂ ಓದಿ: ಮರಾಠಿ, ಕೊಂಕಣಿಯಲ್ಲಿ ನಾಮಫಲಕ; ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಕಾರವಾರ ನಗರಸಭೆ
ನಮ್ಮ ಬೆಂಬಲ ಕೊಂಕಣಿಗೆ: ಆದರೆ ಆಗ ಸುಮ್ಮನ್ನಿದ್ದ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತ್ತೆ ಭಾಷಾ ವಿವಾದದ ಕಿಡಿ ಹಚ್ಚಿದ್ದಾರೆ. ನಾವು ಕೊಂಕಣಿ ಭಾಷಿಗರು. ನಮಗೆ ರಾಜ್ಯ ಸರ್ಕಾರದಿಂದ ನಿರಂತರವಾಗಿ ಅನ್ಯಾಯವಾಗುತ್ತಿದೆ. ಸರ್ಕಾರ ನಮ್ಮ ಮೇಲೆ ಯಾವಾಗ ಕಣ್ಣು ತೆರೆಯುತ್ತದೆ ಅಂತಾ ನೋಡುತ್ತಿದ್ದೇವೆ. ನಮ್ಮ ಬೆಂಬಲ ಯಾವತ್ತಿಗೂ ಕೊಂಕಣಿಗೆ ಎಂದು ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಹೇಳಿಕೆ ಹಿಂಪಡೆಯುವಂತೆ ಆಗ್ರಹ: ಗಡಿ ಭಾಗವಾದ ಕಾರವಾರದ ಮೇಲೆ ನಿರಂತರವಾಗಿ ಪಕ್ಕದ ರಾಜ್ಯಗಳಾದ ಗೋವಾ, ಮಹಾರಾಷ್ಟ್ರದ ಪ್ರಭಾವ ಬೀರುತ್ತಲೆ ಇದೆ. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಆನಂದ್ ಅಸ್ನೋಟಿಕರ್ ಭಾಷಾ ವಿವಾದಕ್ಕೆ ಕಿಡಿ ಹಚ್ಚಿದ್ದು ಸೂಕ್ತವಲ್ಲ. ಚುನಾವಣೆ ಹತ್ತಿರವಾಗುತ್ತಿದೆ ಎಂದು ಅಂಕೋಲ ಮತ್ತು ಕಾರವಾರ ಭಾಗದಲ್ಲಿ ಕೊಂಕಣಿ ಭಾಷಿಗರ ಸಂಖ್ಯೆ ಹೆಚ್ಚಿದೆ ಎಂದು ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಹೀಗೆ ಭಾಷೆ ಭಾಷೆಗಳ ಮಧ್ಯ ತಂದಿಕ್ಕುವ ಕೆಲಸ ಮಾಡಬಾರದು. ಇಲ್ಲಿ ಕನ್ನಡಿಗರು ಮತ್ತು ಕೊಂಕಣಿ ಭಾಷಿಗರು ಬಹಳ ಅನ್ಯೋನ್ಯತೆಯಿಂದ ಇದ್ದಾರೆ. ಇಬ್ಬರ ನಡುವೆ ಹುಳಿ ಹಿಂಡುವ ಕೆಲಸ ಮಾಡಬಾರದು. ಈ ಕೂಡಲೇ ತಮ್ಮ ಹೇಳಿಕೆಯನ್ನ ಹಿಂಪಡೆಯಬೇಕು ಎಂದು ಕನ್ನಡ ಪರ ಸಂಘಟನೆಗಳು ಒತ್ತಾಯ ಮಾಡಿವೆ. ಜೊತೆಗೆ ಮುಂದಿನ ದಿನಗಳಲ್ಲಿ ಇದು ಹೀಗೆ ಮುಂದುವರೆದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಕೊಂಕಣಿಯಲ್ಲಿನಾಮಫಲಕ ಹಾಕಲು ಠರಾವು: ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕಾರವಾರ ನಗರಸಭೆ ನಿರ್ಧಾರ!