ಕಾರವಾರ: ಕೊರೊನಾ ನಡುವೆ ಉತ್ತರ ಕನ್ನಡ ಜಿಲ್ಲೆಯಲ್ಲಿ ತೀವ್ರ ಆತಂಕ ಸೃಷ್ಟಿಸುತ್ತಿರೋ ಮಂಗನ ಕಾಯಿಲೆ ಇದೀಗ ರೈತರನ್ನು ಸಂಕಷ್ಟಕ್ಕೆ ತಳ್ಳಿದೆ. ಕಾಡನ್ನೇ ನಂಬಿ ಬದುಕುತ್ತಿದ್ದ ಅದೆಷ್ಟೋ ರೈತರಿಗೆ ಇದೀಗ ಕಾಡಿಗೆ ತೆರಳಲು ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿರುವ ಆರೋಪ ಕೇಳಿಬಂದಿದ್ದು, ಕೃಷಿ ಚಟುವಟಿಕೆಗೆ ಅಡ್ಡಿಯಾಗುವ ಆತಂಕ ಎದುರಾಗಿದೆ.
ಕೊರೊನಾದಿಂದಾಗಿ ದೇಶವೇ ಲಾಕ್ಡೌನ್ ಆಗಿ ತಿಂಗಳೇ ಕಳೆದಿದೆ. ಆದರೆ, ಕಳೆದ ಎರಡು ವಾರದಿಂದ ಕೃಷಿ ಚಟುವಟಿಕೆಗೆ ಅವಕಾಶ ಕಲ್ಪಿಸಲಾಗಿದ್ದು, ಮಳೆಗಾಲದ ಪೂರ್ವದಲ್ಲಿ ರೈತರು ಕೃಷಿಗೆ ಪೂರಕ ಚಟುವಟಿಕೆ ನಡೆಸಬೇಕಾದ ಅನಿವಾರ್ಯತೆ ಇದೆ. ಆದರೆ ಹೊನ್ನಾವರ ತಾಲೂಕಿನ ಮಂಕಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ತರಗೆಲೆ ತರಲು ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿಪಡಿಸುತ್ತಿರೋ ಆರೋಪ ಕೇಳಿ ಬಂದಿದೆ. ಮಂಗನ ಕಾಯಿಲೆ ಹಿನ್ನೆಲೆಯಲ್ಲಿ ಕಾಡಿಗೆ ತೆರಳದಂತೆ ಸೂಚಿಸಲಾಗಿದೆ. ಒಂದೊಮ್ಮೆ ತೆರಳುವುದಾದರೆ ಡಿಎಂಪಿ ಆಯಿಲ್ ಹಚ್ಚಿಕೊಂಡು ಮುಂಜಾಗ್ರತಾ ಕ್ರಮ ಕೈಗೊಂಡು ತೆರಳುವಂತೆ ಸೂಚಿಸಲಾಗಿದೆ.
ಮಂಕಿ ಭಾಗದ ತಾಳಮಕ್ಕಿ, ಬಾಲಯ್ಯನವಾಡೆ, ದೊಡ್ಡಗುಂದ, ದೇವಿಕಾನ, ಬೋಳೆಬಸ್ತಿ ಭಾಗದ ರೈತರಿಗೆ ಅರಣ್ಯ ಇಲಾಖೆಯವರು ಕಾಡಿಗೆ ತೆರಳಲು ಬಿಡುತ್ತಿಲ್ಲ. ವರ್ಷದಲ್ಲಿ ಎರಡು ವಾರ ರೈತರಿಗೆ ಅರಣ್ಯಕ್ಕೆ ಹೋಗಲು ಅವಕಾಶ ಮಾಡಿಕೊಟ್ಟರೆ ತರಗೆಲೆ ತಂದು ರಾಶಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದು ಮಳೆ ಬರುವ ಮುಂಚೆಯೇ ಆಗಬೇಕು. ಮಳೆ ಬಂದರೆ ತರಗೆಲೆ ತಂದಿಯೂ ಪ್ರಯೋಜನ ಆಗುವುದಿಲ್ಲ. ಆದರೆ ಈ ವರ್ಷ ಯಾವ ರೈತರಿಗೂ ಅರಣ್ಯ ಪ್ರವೇಶಕ್ಕೆ ಬಿಡುತ್ತಿಲ್ಲ. ತರಗೆಲೆ ಇಲ್ಲದಿದ್ದರೆ ಕೃಷಿ ಮಾಡುವುದು ಕಷ್ಟ ಎಂದು ರೈತರು ತಮ್ಮ ನೋವು ತೋಡಿಕೊಂಡಿದ್ದಾರೆ.