ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ರಣ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಕರಾವಳಿ ಭಾಗದ ಹೊನ್ನಾವರ ಹಾಗೂ ಕುಮಟಾ ತಾಲೂಕಿನ ಹಲವು ಗ್ರಾಮದಲ್ಲಿ ಪ್ರವಾಹ ಉಂಟಾಗಿದೆ. ಕಾಳಿ ನದಿಗೆ ಯಥೇಚ್ಚವಾಗಿ ನೀರು ಹರಿದುಬರುತ್ತಿದ್ದು ಕದ್ರಾ ಜಲಾಶಯದಿಂದ ನೀರನ್ನು ನಿರಂತರವಾಗಿ ಹೊರಬಿಡಲಾಗುತ್ತಿದೆ. ಹೊನ್ನಾವರ ತಾಲೂಕಿನಲ್ಲಿ ಶರಾವತಿ ನದಿ ಹಾಗೂ ಗುಂಡಬಾಳ ಹೊಳೆ ಉಕ್ಕಿ ಹರಿದು ಸಾಲ್ಕೋಡ, ಕಡತೋಕ, ಭಾಸ್ಕೇರಿ, ಕೆಕ್ಕಾರ, ಮುರೂರು, ಊರಕೇರಿ ಸೇರಿದಂತೆ ಹಲವು ಗ್ರಾಮಗಳು ಜಲಾವೃತವಾಗಿವೆ.
ನದಿನೀರು ಮನೆ ಹಾಗೂ ತೋಟ, ಗದ್ದೆಗಳಿಗೆ ನುಗ್ಗಿದೆ. ಜಿಲ್ಲಾಡಳಿತ ನೆರೆ ಸೃಷ್ಟಿಯಾದ ಸುಮಾರು 14 ಗ್ರಾಮದ 334 ಜನರನ್ನು ಈಗಾಗಲೇ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದೆ. ಮಳೆ ಹೀಗೆಯೇ ಮುಂದುವರೆದರೆ ಅಂಕೋಲಾ ಹಾಗೂ ಕಾರವಾರ ತಾಲೂಕಿನಲ್ಲಿ ನೆರೆ ಸೃಷ್ಟಿಯಾಗಿ ಹಲವೆಡೆ ಹಾನಿ ಸಂಭವಿಸುವ ಸಾಧ್ಯತೆ ಇದೆ.
ರಸ್ತೆ ಕುಸಿತ-ವಾಹನ ಸಂಚಾರ ಬಂದ್: ನಿರಂತರ ಮಳೆಯಿಂದ ಹೊನ್ನಾವರ ತಾಲೂಕಿನ ಗೆರುಸೊಪ್ಪ ಬಳಿಯ ಸೂಳೆಮುರ್ಖಿ ಬಳಿ ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ರಸ್ತೆ ಕುಸಿದಿದೆ. ಇದು ಸಾಗರ ಹಾಗೂ ಹೊನ್ನಾವರ ನಡುವಿನ ಸಂಪರ್ಕ ರಸ್ತೆಯಾಗಿದೆ. ಸದ್ಯ ತಾತ್ಕಾಲಿಕವಾಗಿ ವಾಹನ ಸಂಚಾರವನ್ನು ಜಿಲ್ಲಾಡಳಿತ ಬಂದ್ ಮಾಡಿದೆ. ಪರ್ಯಾಯ ಮಾರ್ಗವಾಗಿ ತೆರಳಲು ಸೂಚನೆ ನೀಡಲಾಗಿದೆ.
ಜಿಲ್ಲೆಯ ಘಟ್ಟದ ಮೇಲಿನ ತಾಲೂಕಿನಲ್ಲಿಯೂ ಮಳೆ ಹೆಚ್ಚಾಗಿದ್ದು, ಕಾಳಿ ನದಿಯಲ್ಲಿ ನೀರು ಉಕ್ಕಿ ಹರಿಯುತ್ತಿದೆ. ನದಿಗೆ ಅಡ್ಡಲಾಗಿ ಕಟ್ಟಿರುವ ಜಲಾಶಯ ಭರ್ತಿಯಾಗುತ್ತಿದೆ. ಕಾರವಾರ ತಾಲೂಕಿನ ಕದ್ರಾ ಜಲಾಶಯದಲ್ಲಿ ಒಳ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ಜಲಾಶಯದ 8 ಗೇಟ್ಗಳನ್ನು ತೆರೆದು ಸುಮಾರು 40 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಕಾರವಾರ ತಾಲೂಕಿನ ಕಾಳಿ ನದಿ ಪಾತ್ರದ ಜನರಲ್ಲಿ ಪ್ರವಾಹ ಭೀತಿ ಎದುರಾಗಿದೆ.
ನಗರ ಪ್ರದೇಶದಲ್ಲಿ ಕೂಡ ಮಳೆಯಿಂದ ಸಮಸ್ಯೆ ಎದುರಾಗಿದೆ. ಕಾರವಾರ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ನಿರಂತರ ಮಳೆಯಿಂದ ಡಯಾಲಿಸಿಸ್ ಕೇಂದ್ರಕ್ಕೆ ನೀರು ನುಗ್ಗಿದೆ. ಸುಮಾರು ಒಂದೂವರೆ ಅಡಿಯಷ್ಟು ನೀರು ನುಗ್ಗಿದ್ದು ಆಸ್ಪತ್ರೆ ಸಿಬ್ಬಂದಿ ರೋಗಿಗಳಿಗೆ ಸಮಸ್ಯೆಯಾಗದಂತೆ ಮೋಟಾರುಗಳಲ್ಲಿ ನೀರು ಹೊರಹಾಕಿದ್ದಾರೆ.
ಇದನ್ನೂ ಓದಿ: ಅಪಾಯದ ಮಟ್ಟದಲ್ಲಿ ಧುಮ್ಮಿಕ್ಕುತ್ತಿರುವ ಜಲಪಾತಗಳು: ವಿಭೂತಿ, ನಾಗರಮಡಿ, ಗೋಲಾರಿ ಫಾಲ್ಸ್ಗೆ ಪ್ರವಾಸಿಗರ ನಿಷೇಧ