ಕಾರವಾರ: ವಾಣಿಜ್ಯ ಬಂದರು ವಿಸ್ತರಣೆ ಹೋರಾಟ ಐದನೇ ದಿನಕ್ಕೆ ಕಾಲಿಟ್ಟಿದ್ದು, ಬಂದ್ ಪ್ರತಿಭಟನೆ ಬಳಿಕವೂ ಕಾಮಗಾರಿ ನಡೆಸಲು ಮುಂದಾದ ಹಿನ್ನೆಲೆ ಮೀನುಗಾರರು ಇಂದು ಮತ್ತೆ ಪ್ರತಿಭಟನೆ ಮುಂದುವರಿಸಿದ್ದಾರೆ.
ವಾಣಿಜ್ಯ ಬಂದರು ವಿಸ್ತರಣೆ ನಡೆಯುವ ಸ್ಥಳದಲ್ಲಿ ಇಂದು ಜೆಸಿಬಿಗಳು ಸದ್ದು ಮಾಡುತ್ತಿದ್ದಂತೆ ಸ್ಥಳಕ್ಕೆ ಜಮಾಯಿಸಿದ ಮೀನುಗಾರರು ಕೂಡಲೇ ಕಾಮಗಾರಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು. ಅಲ್ಲದೇ ಪೊಲೀಸರೊಂದಿಗೆ ವಾಗ್ವಾದ ನಡೆಸಿ ಕೊನೆಗೂ ಕಾಮಗಾರಿ ಸ್ಥಗಿತಗೊಳಿಸಿದರು. ಬಳಿಕ ಮೀನು ಮಾರಾಟ ಸ್ಥಗಿತಗೊಳಿಸಿದ ಮೀನುಗಾರ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡು ಧರಣಿ ಮುಂದುವರಿಸಿದ್ದು ಯೋಜನೆ ಸಂಪೂರ್ಣ ಸ್ಥಗಿತಗೊಳಿಸುವರೆಗೂ ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದ್ದಾರೆ.
ಪ್ರತಿಭಟನೆ ನಡುವೆಯೂ ಮೀನು ಮಾರಾಟಕ್ಕೆ ಯತ್ನ, ಮಹಿಳೆಗೆ ಮೀನುಗಾರರಿಂದ ತರಾಟೆ
ಪ್ರತಿಭಟನೆ ಹಿನ್ನೆಲೆ ಮೀನುಗಾರರು ಮೀನು ಮಾರಾಟವನ್ನು ಸ್ಥಗಿತಗೊಳಿಸಿದ್ದರು. ಆದರೂ ಮಹಿಳೆಯೋರ್ವಳು ಮೀನು ಮಾರಾಟಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಮಹಿಳೆಯರು ತೀವ್ರ ತರಾಟೆಗೆ ತೆಗೆದುಕೊಂಡರು. ಅಲ್ಲದೇ ಮಾರಾಟಕ್ಕೆ ತಂದಿದ್ದ ಮೀನನ್ನು ಲಾಕ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.