ಕಾರವಾರ: ವಾಣಿಜ್ಯ ಬಂದರು ವಿಸ್ತರಣೆ ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಮೀನುಗಾರರು ನಡೆಸುತ್ತಿರುವ ಹೋರಾಟ ಎಂಟನೇ ದಿನಕ್ಕೆ ಕಾಲಿಟ್ಟಿದೆ. ಈ ಪ್ರತಿಭಟನೆಗೆ ಇಂದು ಕರ್ನಾಟಕ ರೈತ ಸಂಘ, ಜಯ ಕರ್ನಾಟಕ ಸಂಘಟನೆಗಳ ಜೊತೆಗೆ ಆಟೋ, ಟೆಂಪೋ ಚಾಲಕರು ಸಾಥ್ ನೀಡಿದ್ದಾರೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಸಾಗರಮಾಲಾ ಯೋಜನೆ ಬೇಡ. ಕಡಲತೀರ ಉಳಿಸಿ ಎಂದು ಒತ್ತಾಯಿಸಿದರು. ಮೀನುಗಾರಿಕೆ ಹಾಗೂ ಮೀನು ಮಾರಾಟ ಸ್ಥಗಿತಗೊಳಿಸಿ ಮೀನುಗಾರರು ಧರಣಿ ನಡೆಸುತ್ತಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಹರೀಶ್ಕುಮಾರ್, ಸಾಗರಮಾಲಾ ಯೋಜನೆಯಡಿ ಬಂದರು ವಿಸ್ತರಣೆಯಿಂದ ಮೀನುಗಾರರಿಗೆ ಆಗುವ ತೊಂದರೆ ಕುರಿತು ಸಂಬಂಧಪಟ್ಟ ಸಚಿವರಿಗೆ ಮನವರಿಕೆ ಮಾಡಲಾಗಿದೆ. ಅದರಂತೆ ಕಾಮಗಾರಿ ನಿಲ್ಲಿಸಿದ್ದೇವೆ. ಸಚಿವರು ಮೀನುಗಾರರ ಮುಖಂಡರೊಂದಿಗೆ ಸಭೆ ನಡೆಸಲು ಮುಂದಾಗಿದ್ದಾರೆ. ನೀವು ಒಪ್ಪಿದ ತಕ್ಷಣವೇ ಸಭೆ ಆಯೋಜಿಸಲಾಗುವುದು ಎಂದು ಭರವಸೆ ನೀಡಿದ ಅವರು, ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು.