ಕಾರವಾರ: ಹೊನ್ನಾವರ ತಾಲೂಕಿನ ಇಡಗುಂಜಿಯ ತಮ್ಮ ನಿವಾಸದಲ್ಲಿಯೇ ಶುಕ್ರವಾರ ರಾತ್ರಿ ಕೃಷ್ಣಯಾಜಿ (78) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಇಂದು ಕುಟುಂಬಸ್ಥರು ಹಾಗೂ ಅಭಿಮಾನಿಗಳು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ಇದಾದ ಬಳಿಕ ಅಂತಿಮ ವಿಧಿ ವಿಧಾನ ನೆರವೇರಿಸಲಾಗಿದೆ.
ಬಣ್ಣ ಹಚ್ಚಿ ವೇಷ ಕಟ್ಟಿ ಕುಣಿದು ಕಲಾವಿದರಾಗಿ ಯಕ್ಷರಂಗದಲ್ಲಿ ಪಯಣ ಆರಂಭಿಸಿದ್ದ ಕೃಷ್ಣಯಾಜಿ ಮದ್ದಲೆ ವಾದಕರಾಗಿ, ಚೆಂಡೆವಾದನದಲ್ಲಿ ಐದು ದಶಕಗಳ ಕಾಲ ಕಲಾವಿದರನ್ನು ರಂಗದಲ್ಲಿ ಕುಣಿಸಿದ್ದರು. ಪತ್ನಿ ರತ್ನಾವತಿ ಯಾಜಿ, ಮಕ್ಕಳಾದ ಮೀರಾ, ತನುಜಾ ಹಾಗೂ ವಾಣಿ ಅವರನ್ನು ಅಗಲಿರುವ ದಿವಂಗತರು ಯಕ್ಷರಂಗದಲ್ಲಿ ಬಹುದೊಡ್ಡ ಹೆಸರು ಗಳಿಸಿದ್ದರು. ಖ್ಯಾತ ಮದ್ದಲೆ ವಾದಕ ಕಿನ್ನೀರು ನಾರಾಯಣ ಹೆಗಡೆಯವರಲ್ಲಿ ಮದ್ದಲೆ ಅಭ್ಯಾಸ ಮಾಡಿ ಹಿರಿಯ ಭಾಗವತ ಗುಂಡ್ಮಿ ರಾಮಚಂದ್ರ ನಾವಡರಿಂದ ಚಂಡೆ ಹಾಗೂ ಮದ್ದಲೆ ವಾದನದಲ್ಲಿ ಸೂಕ್ತ ಮಾರ್ಗದರ್ಶನ ಪಡೆದುಕೊಂಡಿದ್ದರು.
ಇಡಗುಂಜಿ, ಗುಂಡಿಬೈಲ್, ಕರ್ಕಿ ಹಾಸ್ಯಗಾರ, ಕಮಲಶಿಲೆ, ಸಲಿಗ್ರಾಮ, ಅಮೃತೇಶ್ವರಿ, ಮೂಲ್ಕಿ, ಗುಂಡಬಾಳಾ ಮೇಳಗಳಲ್ಲಿ ಐದು ದಶಕಗಳ ಕಾಲ ಚಂಡೆ ನುಡಿಸಿ ಖ್ಯಾತಿಯ ಉತ್ತುಂಗ ತಲುಪಿದ್ದರು. ರಾಜ್ಯದ ಗಡಿ ದಾಟಿ ದೇಶದ ಮೂಲೆ ಮೂಲೆಯಲ್ಲಿಯೂ ಯಕ್ಷಗಾನದ ಕಂಪು ಪಸರಿಸುವಲ್ಲಿ ಶ್ರಮಿಸಿದ್ದ ಇವರು ಅನೇಕ ಬಾರಿ ಸಾಗರದಾಚೆಗೂ ಪ್ರವಾಸ ಕೈಗೊಂಡು ಯಕ್ಷಗಾನದ ಸವಿಯನ್ನು ಯಕ್ಷಪ್ರೇಮಿಗಳಿಗೆ ಉಣಬಡಿಸಿದ್ದರು.
ಕೃಷ್ಣಯಾಜಿ ಅವರಿಗೆ ಕರ್ನಾಟಕ ರಾಜ್ಯ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ, ಯಕ್ಷ ಸಿಂಚನ ಟ್ರಸ್ಟ್ ಬೆಂಗಳೂರು ನೀಡುವ ಸಾಧಕ ಪ್ರಶಸ್ತಿ ಹೀಗೆ ಹತ್ತಾರು ಪ್ರಶಸ್ತಿಗಳು ಒಲಿದು ಬಂದಿದ್ದವು.
ಕೃಷ್ಣಯಾಜಿ ಅವರ ಅಗಲಿಕೆಗೆ ಇಡೀ ಯಕ್ಷರಂಗವೇ ಕಂಬನಿ ಮಿಡಿದಿದೆ. ಮದ್ದಳೆಯ ಮೂಲಕವೇ ಪ್ರಸಿದ್ಧಿ ಪಡೆದ ಕೃಷ್ಣಯಾಜಿ ಸ್ತ್ರೀ ಪಾತ್ರ ಬಂದಾಗಲು ತಮ್ಮ ಚೆಂಡೆಯ ಸದ್ದನ್ನು ಮೊಳಗಿಸಿ ಯಕ್ಷಕಲೆಯನ್ನು ಹೆಚ್ಚಿಸಿದ್ದಾರೆ.
ಇಂಥ ಯಕ್ಷ ಗಾರುಡಿಗನ ಅಗಲಿಕೆ ಯಕ್ಷಗಾನಕ್ಕೆ ತುಂಬಲಾಗದ ನಷ್ಟ. ಕೊರೊನಾದಂತ ಸಂಕಷ್ಟದಿಂದಾಗಿ ಕೊನೆಯದಾಗಿ ಅವರ ಮುಖ ನೋಡಲು ಸಾಧ್ಯವಾಗಿಲ್ಲ. ಆದರೆ ಅವರು ಅಗಲಿರುವುದು ಸಾಕಷ್ಟು ಕಲಾವಿದರಿಗೆ ನೋವು ತರಿಸಿದೆ ಎಂದು ರಾಜ್ಯ ಪ್ರಶಸ್ತಿ ವಿಜೇತ ಬಳಕೂರು ಕೃಷ್ಣಯಾಜಿ ಕಂಬನಿ ಮಿಡಿದಿದ್ದಾರೆ.