ಕಾರವಾರ: ಭಟ್ಕಳದ ಪಂಚಾಯಿತಿಯೊಂದರಲ್ಲಿ ನಡೆದಿದ್ದ ಬಕೆಟ್ ಖರೀದಿ ಹಗರಣ ಇಡೀ ಜಿಲ್ಲೆಯಾದ್ಯಂತ ಸಾಕಷ್ಟು ಸದ್ದು ಮಾಡಿತ್ತು. ಮಾರುಕಟ್ಟೆಯಲ್ಲಿ 300, 500 ರೂಪಾಯಿಗೆ ಸಿಗುವ ಕಸ ತುಂಬುವ ಬಕೆಟ್‌ವೊಂದಕ್ಕೆ ಬರೋಬ್ಬರಿ 950 ರೂಪಾಯಿ ಬಿಲ್ ಹಾಕಿ ಖರೀದಿ ಮಾಡಿದ್ದು, ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ 'ಈಟಿವಿ ಭಾರತ್' ವರದಿ ಮಾಡಿತ್ತು. ಪ್ರಕರಣದ ಕುರಿತು ತನಿಖೆ ನಡೆಸಿರುವ ಜಿಲ್ಲಾ ಪಂಚಾಯತ್ ಸಿಇಓ ಇದೀಗ ಅವ್ಯವಹಾರ ಸಾಬೀತಾದ ಹಿನ್ನೆಲೆಯಲ್ಲಿ ಹೆಚ್ಚುವರಿ ಹಣವನ್ನು ಮರುಪಾವತಿ ಮಾಡುವಂತೆ ಆದೇಶಿಸಿದ್ದಾರೆ.
ಹೌದು, ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಶಿರಾಲಿ ಗ್ರಾಮ ಪಂಚಾಯತ್‌ನಲ್ಲಿ, ದುಬಾರಿ ವೆಚ್ಚದ ಕಸ ತುಂಬುವ ಬಕೆಟ್‌ಗಳನ್ನು ಖರೀದಿ ಮಾಡಿದ್ದ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಸ್ವಚ್ಛ ಗ್ರಾಮ ಯೋಜನೆಯಡಿ ಪಂಚಾಯತ್ ವ್ಯಾಪ್ತಿಯ ಮನೆಗಳ ಕಸ ವಿಲೇವಾರಿಗೆ ಬಳಸಲು ಕಸದ ಬುಟ್ಟಿಗಳನ್ನು ಖರೀದಿಸಿ, ಅವುಗಳನ್ನು ಆಯ್ದ ಮನೆ, ಹೋಟೆಲ್, ಅಂಗಡಿಗಳಿಗೆ ಹಂಚಲಾಗಿತ್ತು.
ಸಾಮಾನ್ಯವಾಗಿ ಮಾರುಕಟ್ಟೆಗಳಲ್ಲಿ 300 ರಿಂದ 500 ರೂಪಾಯಿಗೆ ಸಿಗುವ ಕಸದ ಬಕೆಟ್‌ಗಳಿಗೆ ಬರೋಬ್ಬರಿ 950 ರೂಪಾಯಿ ನೀಡಿ ಖರೀದಿ ಮಾಡಿರುವ ಬಗ್ಗೆ 'ಈಟಿವಿ ಭಾರತ್' ವಿಸ್ತೃತ ವರದಿ ಮಾಡಿತ್ತು. ಬಳಿಕ ಇದರ ಖರೀದಿ ಬಿಲ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಅಲ್ಲದೇ ಇದೊಂದು ಬ್ರಹ್ಮಾಂಡ ಭ್ರಷ್ಟಾಚಾರ ಎನ್ನುವುದು ತಿಳಿಯುತ್ತಿದ್ದಂತೆ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ತನಿಖೆಗೆ ಆದೇಶಿಸಿದ್ದು, ಬಕೆಟ್ ಖರೀದಿಯಲ್ಲಿ ಪಿಡಿಓ ಅಕ್ರಮ ಬೆಳಕಿಗೆ ಬಂದಿದೆ.
ಶಿರಾಲಿ ಪಂಚಾಯ್ತಿ ಪಿಡಿಓ ಮೇಲೆ ಬಕೆಟ್ ಖರೀದಿಯಲ್ಲಿ ಭ್ರಷ್ಟಾಚಾರ ಎಸಗಿರುವ ಆರೋಪ ಕೇಳಿ ಬಂದಿತ್ತು. ಬಕೆಟ್ ಹಗrಣದ ಬಗ್ಗೆ ಕೈಗಾರಿಕಾ ಇಲಾಖೆ ಉಪನಿರ್ದೇಶಕರಿಂದ ತನಿಖೆ ಮಾಡಿಸಿದ್ದು, ಆರೋಪ ಸಾಬೀತಾಗಿದೆ. ಸುಮಾರು 60 ಸಾವಿರದಷ್ಟು ಹೆಚ್ಚುವರಿ ಹಣ ಪಾವತಿಯಾಗಿರುವ ಬಗ್ಗೆ ತನಿಖೆಯಲ್ಲಿ ದಾಖಲಿಸಿದ್ದಾರೆ. ಈ ಬಗ್ಗೆ ಇಲಾಖೆಯಿಂದಲೂ ತನಿಖೆ ಮಾಡಿಸಿ ಪಿಡಿಓ ಅವರಿಂದ ಹೆಚ್ಚುವರಿ ಹಣವನ್ನು ವಸೂಲಿ ಮಾಡಲಾಗಿದೆ. ಅಲ್ಲದೆ ಅವರ ಮೇಲೆ ಶಿಸ್ತುಕ್ರಮ ಕೂಡ ಜರುಗಿಸಲಾಗಿದೆ ಎನ್ನುತ್ತಾರೆ ಸಿಇಓ ಈಶ್ವರ ಕಾಂದೂ.
ಇನ್ನು ಶಿರಾಲಿ ಗ್ರಾಮ ಪಂಚಾಯತ್‌ನಿಂದ ಎರಡು ಪ್ರತ್ಯೇಕ ಬಿಲ್‌ಗಳ ಮೂಲಕ 195 ಕಸ ತುಂಬುವ ಬಕೆಟ್‌ಗಳನ್ನು ಖರೀದಿಸಿದ್ದು, ಇದಕ್ಕಾಗಿ 1,85,250 ರೂಪಾಯಿಗಳನ್ನು ವೆಚ್ಚ ಮಾಡಲಾಗಿತ್ತು. ಇದು ಮೇಲ್ನೋಟಕ್ಕೆ ಭ್ರಷ್ಟಾಚಾರದ ಸುಳಿವು ನೀಡಿದ್ದು, ಈ ಬಗ್ಗೆ ತನಿಖೆ ನಡೆಸಿದ ಸಿಇಓ ಹೆಚ್ಚುವರಿಯಾಗಿ ಬಳಕೆಯಾಗಿರುವ ಸುಮಾರು 60 ಸಾವಿರ ರೂಪಾಯಿಗಳನ್ನು ಮರುಪಾವತಿ ಮಾಡುವಂತೆ ಆದೇಶಿಸಿದ್ದಾರೆ. ಇನ್ನು ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳ ಕ್ರಮಕ್ಕೆ ಸಾರ್ವಜನಿಕರಿಂದಲೂ ಶ್ಲಾಘನೆ ವ್ಯಕ್ತವಾಗಿದ್ದು, ಕೇವಲ ಬಕೆಟ್ ಖರೀದಿ ಮಾತ್ರವಲ್ಲದೇ ಬೇರೆ ವಸ್ತುಗಳ ಖರೀದಿಯಲ್ಲೂ ಅವ್ಯವಹಾರ ನಡೆದಿರುವ ಸಾಧ್ಯತೆಗಳಿವೆ. ಹೀಗಾಗಿ ಈ ಬಗ್ಗೆ ಪರಿಶೀಲಿಸುವಂತೆ ಸ್ಥಳೀಯರಾದ ರವಿ ಕಸಬೇಕರ್ ಮನವಿ ಮಾಡಿದ್ದಾರೆ.
ಒಟ್ಟಾರೆ ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂಬ ಮಾತಿನಂತೆ ಬಕೆಟ್ ಖರೀದಿಯಲ್ಲಿ ಗೋಲ್‌ಮಾಲ್ ನಡೆಸಿದವರಿಗೆ ತಕ್ಕ ಶಾಸ್ತಿ ಆಗಿದ್ದಂತೂ ಸತ್ಯ. ಇದೇ ರೀತಿ ಮುಂದಿನ ದಿನಗಳಲ್ಲೂ ಹದ್ದಿನ ಕಣ್ಣಿಡುವ ಮೂಲಕ ಗ್ರಾಮ ಪಂಚಾಯತ್‌ಗಳು ಭ್ರಷ್ಟಾಚಾರ ಮುಕ್ತವಾಗಿ, ಜನಪರವಾಗಲಿ ಅನ್ನೋದೇ ನಮ್ಮ ಆಶಯ.
ಇದನ್ನೂ ಓದಿ: ನೂರಿನ್ನೂರು ರೂಪಾಯಿಗೆ ಸಿಗುವ ಕಸದ ಬುಟ್ಟಿಗೆ ₹900! ಗ್ರಾ.ಪಂಗಳ ವಿರುದ್ಧ ಭ್ರಷ್ಟಾಚಾರ ಆರೋಪ