ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಿರವತ್ತಿ ಭಾಗದಲ್ಲಿ ಆನೆಗಳ ದಾಳಿಯಿಂದ ನೂರಾರು ಎಕರೆ ಭತ್ತ ಹಾಗೂ ಕಬ್ಬಿನ ಬೆಳೆ ನಾಶವಾಗಿದ್ದು,ರೈತರು ಆತಂಕದಲ್ಲಿದ್ದಾರೆ.
ಕಳೆದ ಒಂದು ವಾರದಿಂದ 10ಕ್ಕೂ ಹೆಚ್ಚು ಆನೆಗಳ ಹಿಂಡು ಭತ್ತ ಹಾಗೂ ಕಬ್ಬಿನ ಪ್ರದೇಶ ಬೆಳೆಗಳಮೇಲೆ ದಾಳಿ ನಡೆಸಿ, ಬೆಳೆಗಳನ್ನು ನಾಶ ಮಾಡಿವೆ. ಬೆಳೆದು ಕಟಾವಿಗೆ ಬಂದಿರುವ ಭತ್ತದ ಬೆಳೆಯನ್ನು ತುಳಿದು,ನುಜ್ಜುಗುಜ್ಜು ಮಾಡಿವೆ. ಅಲ್ಲದೇ, ಬೆಳೆಗಳ ಮೇಲೆ ಲದ್ದಿ ಹಾಕಿರುವ ಪರಿಣಾಮ ಉಪಯೋಗಕ್ಕೆ ಬಾರದಂತಾಗಿದೆ.
ಕಿರವತ್ತಿ ಹಾಗೂ ಮದನೂರು ಭಾಗದಲ್ಲಿ ಆನೆಗಳ ಹಿಂಡು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಕಬ್ಬಿನ ಬೆಳೆಗಾರರು ಆತಂಕದಲ್ಲಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.