ಕಾರವಾರ: ನಕಲಿ ಚಿನ್ನವನ್ನು ಅಸಲಿ ಎಂದು ನಂಬಿಸಿ ಮಾರಾಟ ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.
ಗುಜರಾತ್ ಮೂಲದ ಹರಿಲಾಲ್ (62 )ಹಾಗೂ ಪನ್ನಾಲಾಲ್(36) ಬಂಧಿತ ಆರೋಪಿಗಳಾಗಿದ್ದಾರೆ. ನಗರದ ಬಸ್ ನಿಲ್ದಾಣದ ಬಳಿ ಅತಾವುಲ್ಲಾ ಎನ್ನುವ ಅಂಗಡಿ ಮಾಲೀಕರಿಗೆ ಅಸಲಿ ಚಿನ್ನವನ್ನು ತೋರಿಸಿ ನಕಲಿ ಚಿನ್ನವನ್ನು ಮಾರಾಟ ಮಾಡಲು ಮುಂದಾಗಿದ್ದರು. ತಮ್ಮ ಜಮೀನಿನಲ್ಲಿ ಕೃಷಿ ಮಾಡುವಾಗ ಚಿನ್ನ ಸಿಕ್ಕಿದ್ದು ಮಗಳ ಮದುವೆಗೆ ಹಣದ ಅವಶ್ಯಕತೆ ಇರುವುದರಿಂದ ಕಡಿಮೆ ಬೆಲೆಗೆ ನೀಡುವುದಾಗಿ ಅಂಗಡಿಯವನ ಬಳಿ ಹೇಳಿಕೊಂಡಿದ್ದರು.ಸಾಲದಕ್ಕೆ ಅಸಲಿ ಚಿನ್ನವನ್ನು ತೋರಿಸಿ ಅನುಮಾನವಿದ್ದರೆ ಪರೀಕ್ಷಿಸುವಂತೆ ತಿಳಿಸಿದ್ದರು.
ಬಳಿಕ ತಮ್ಮಲ್ಲಿರುವ ಉಳಿದ ಚಿನ್ನವನ್ನು ತಂದುಕೊಡುವುದಾಗಿ ತಿಳಿಸಿದ್ದರು. ಆದರೆ ಇದರಿಂದ ಅನುಮಾನಗೊಂಡ ಅಂಗಡಿ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರ ಕಾರ್ಯಾಚರಣೆ ಮೂಲಕ ಆರೋಪಿಗಳಿಂದ ಸುಮಾರು 2 ಕೆಜಿ ನಕಲಿ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ನಕಲಿ ಚಿನ್ನ ಮಾರಾಟ ಜಾಲ ರಾಜ್ಯಾದ್ಯಂತ ಹಬ್ಬಿಕೊಂಡಿದೆ ಎನ್ನಲಾಗಿದ್ದು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ನಗರ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.