ಭಟ್ಕಳ: ತಾವು ಕಲಿತು ಬೆಳೆದ ಶಾಲೆಯ ಅಭಿವೃದ್ಧಿಯತ್ತ ಹಳೆ ವಿದ್ಯಾರ್ಥಿಗಳು ಮನಸ್ಸು ಮಾಡಿದ್ರೆ, ಖಾಸಗಿ ಶಾಲೆಗಿಂತಲು ಉತ್ತಮ ರೀತಿಯಲ್ಲಿ ಸರ್ಕಾರಿ ಶಾಲಾ ಬೆಳವಣಿಗೆ ಸಾಧ್ಯವಾಗಲಿದೆ. ಶಾಲೆಗಳಿಗೆ ದಾನ ಮಾಡಿದ ದಾನಿಗಳು ಶ್ರೇಷ್ಠರು ಎಂದು ಶಾಸಕ ಸುನೀಲ್ ನಾಯ್ಕ ಬಣ್ಣಿಸಿದರು.
ಭಟ್ಕಳದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಹಾಗೂ ನಲಿ-ಕಲಿ ಪೀಠೋಪಕರಣಗಳ ಶಾಲಾರ್ಪಣಾ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದ್ರು.
ಉದ್ಘಾಟನೆ ಬಳಿಕ ಮಾತನಾಡಿದ ಅವರು, ಸರ್ಕಾರಿ ಶಾಲೆಯೆಂದರೆ ಎಲ್ಲರೂ ಮೂಗು ಮೂರಿಯುವ ಸಂದರ್ಭದಲ್ಲಿ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿ, ಶಿಕ್ಷಣ ನೀಡಲು ಮುಂದಾಗುತ್ತಿದ್ದಾರೆ. ಹಾಗಾಗಿ ಸರ್ಕಾರಿ ಶಾಲಾ ಶಿಕ್ಷಣದಿಂದ ಮಕ್ಕಳು ಶಿಕ್ಷಿತರಾಗಲು ಸಾಧ್ಯವಿಲ್ಲ. ದೊಡ್ಡ ಸಾಧನೆ ಹಾಗೂ ಹುದ್ದೆಯಲ್ಲಿರುವವರೆಲ್ಲರೂ ಸರ್ಕಾರಿ ಶಾಲೆಯಿಂದಲೇ ಹೋಗಿರುವವರೇ ಆಗಿದ್ದಾರೆ. ಸರ್ಕಾರಿ ಶಾಲೆಯ ಏಳಿಗೆಗೆ ಶ್ರಮಿಸಿದ, ದಾನ, ಕೊಡುಗೆ ನೀಡಿದವರೇ ಶ್ರೇಷ್ಠರು ಎಂದರು.
ಶಾಲೆಯ ಪ್ರಮುಖ ದಾನಿ ಹಾಗೂ ಉದ್ಯಮಿ, ಹಳೆ ವಿದ್ಯಾರ್ಥಿ ದಿನೇಶ ಭಟ್ ಮಾತನಾಡಿ, ಒಂದು ಉದ್ದೇಶ, ಗುರಿಯಿಟ್ಟು ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಬೇಕಿದೆ. ಉದ್ದೇಶವೂ ಸ್ಪಷ್ಟವಾಗಿದ್ದಲ್ಲಿ, ನಾವು ಹೋಗುವ ದಾರಿ ಯಾವತ್ತೂ ನೆನಪಿಸುತ್ತದೆ. ನಮ್ಮನ್ನು ಅದರತ್ತ ಕೊಂಡೊಯ್ಯಲು ಸಹಕಾರಿಯಾಗಲಿದೆ ಎಂದು ಕಿವಿಮಾತು ಹೇಳಿದ್ರು.