ಕಾರವಾರ: ಈ ಬಾರಿ ದೀಪಾವಳಿ ಹಬ್ಬ ವಾರದ ಆರಂಭದಲ್ಲಿ ಬಂದಿದ್ದು ಅದಕ್ಕೂ ಮೊದಲು ನಾಲ್ಕನೇಯ ಶನಿವಾರ, ಭಾನುವಾರ ಸಹ ರಜೆ ಇರುವ ಹಿನ್ನೆಲೆ ಹಬ್ಬದ ಆಚರಣೆಗೆ ಸಾಕಷ್ಟು ರಜೆ ಸಿಕ್ಕಂತಾಗಿದೆ. ಈ ಹಿನ್ನೆಲೆ ನಗರ ಪ್ರದೇಶದಲ್ಲಿ ಕೆಲಸದ ಒತ್ತಡದಲ್ಲಿ ಸಿಲುಕಿಕೊಂಡಿದ್ದವರು ಕೊಂಚ ನೆಮ್ಮದಿಯಾಗಿ ಕಾಲ ಕಳೆಯುವ ನಿಟ್ಟಿನಲ್ಲಿ ಕುಟುಂಬಸ್ಥರು, ಸ್ನೇಹಿತರೊಂದಿಗೆ ಪ್ರವಾಸಿ ತಾಣಗಳತ್ತ ಮುಖಮಾಡಿದ್ದಾರೆ. ಈ ಹಿನ್ನೆಲೆ ವಿಶ್ವಪ್ರಸಿದ್ಧ ಮುರುಡೇಶ್ವರದಲ್ಲಿ ಪ್ರವಾಸಿಗರು ತುಂಬಿ ತುಳುಕುತ್ತಿದ್ದು, ವಿವಿಧ ಜಲಸಾಹಸ ಕ್ರೀಡೆಗಳನ್ನು ಆಡುವ ಮೂಲಕ ಎಂಜಾಯ್ ಮಾಡುತ್ತಿದ್ದಾರೆ.
ಒಂದೆಡೆ ಕಡಲತೀರದಲ್ಲಿ ಸಮುದ್ರದ ಅಲೆಗಳಿಗೆ ಮೈಯೊಡ್ಡಿ ನೀರಲ್ಲಿ ಈಜಾಡುತ್ತ ಎಂಜಾಯ್ ಮಾಡುತ್ತಿರುವ ಮಹಿಳೆಯರು, ಮಕ್ಕಳು. ಇನ್ನೊಂದೆಡೆ ಬೀಚ್‌ನಲ್ಲಿರುವ ವಿವಿಧ ಜಲಸಾಹಸ ಕ್ರೀಡೆಗಳನ್ನು ಆಡುವ ಮೂಲಕ ರಜೆಯ ಮಜವನ್ನು ಅನುಭವಿಸುತ್ತಿರುವ ಪ್ರವಾಸಿಗರು. ಮತ್ತೊಂದೆಡೆ ಸಮುದ್ರತೀರಕ್ಕೆ ಹೊಂದಿಕೊಂಡೇ ಇರುವ ಬೃಹತ್ ಶಿವನ ಮೂರ್ತಿಯ ದರ್ಶನ ಪಡೆಯಲು ಹರಿದುಬರುತ್ತಿರುವ ಜನಸಾಗರ. ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು, ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮುರುಡೇಶ್ವರದಲ್ಲಿ.
ರಾಜ್ಯ, ಹೊರರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಗಳಿಸಿರುವ ಮುರುಡೇಶ್ವರನ ತಾಣಕ್ಕೆ ಪ್ರವಾಸಿಗರ ದಂಡೇ ಹರಿದುಬಂದಿದೆ. ಶನಿವಾರದಿಂದಲೇ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಕಳೆದ ಭಾನುವಾರ ಇಲ್ಲಿನ ಕಡಲತೀರ ಅಕ್ಷರಶಃ ಪ್ರವಾಸಿಗರಿಂದಲೇ ತುಂಬಿ ತುಳುಕುತ್ತಿತ್ತು. ವಿವಿಧೆಡೆಗಳಿಂದ ಆಗಮಿಸಿದ್ದ ಪ್ರವಾಸಿಗರು ದೇವರ ದರ್ಶನ ಪಡೆಯುವುದರ ಜೊತೆಗೆ ಕಡಲಿಗೆ ಇಳಿದು ಎಂಜಾಯ್ ಮಾಡಿದರು.
ಮುರುಡೇಶ್ವರದಲ್ಲಿ ದೇವಸ್ಥಾನದ ಜೊತೆಗೆ ರಾಜ್ಯದಲ್ಲೇ ಅತೀ ಎತ್ತರದ ಶಿವನ ಬೃಹತ್ ಪ್ರತಿಮೆಯಿದ್ದು, ಸಮುದ್ರ ತೀರಕ್ಕೆ ಹೊಂದಿಕೊಂಡ ನಡುಗಡ್ಡೆಯ ಮೇಲೆ ವಿರಾಜಮಾನವಾಗಿದೆ. ಹೀಗಾಗಿ ಇಲ್ಲಿನ ಶಿವನ ಪ್ರತಿಮೆಯನ್ನು ನೋಡೋದಕ್ಕೆ ಅಂತಾನೇ ವಿವಿಧೆಡೆಗಳಿಂದ ಪ್ರವಾಸಿಗರು ಆಗಮಿಸುತ್ತಾರೆ.
ಒಂದೊಳ್ಳೆ ಟೂರ್ ಪ್ಯಾಕೇಜ್: ಭಕ್ತಿಯೊಂದಿಗೆ, ರಜೆಯ ಮಜಾ ಎಂಜಾಯ್ ಮಾಡಲು ಇಲ್ಲಿನ ಕಡಲತೀರದಲ್ಲಿ ಸ್ಪೀಡ್ ಬೋಟ್, ಜೆಟ್ ಸ್ಕೀ, ಬೋಟಿಂಗ್ ಸೇರಿದಂತೆ ರಾಜ್ಯದ ಏಕೈಕ ಸ್ಕೂಬಾ ಡೈವಿಂಗ್ನಂತಹ ಜಲಸಾಹಸ ಕ್ರೀಡೆಗಳೂ ಇವೆ. ಹೀಗಾಗಿ ಇಲ್ಲಿಗೆ ಬರುವ ಪ್ರವಾಸಿಗರು ಎಂಜಾಯ್ ಮಾಡೋದಕ್ಕೆ ಎಲ್ಲ ರೀತಿಯ ಅನುಕೂಲತೆಗಳು ಸಹ ಇದ್ದು ಮಹಿಳೆಯರು, ಮಕ್ಕಳೂ ಸಹ ಖುಷಿಯಾಗಿ ಕಾಲವನ್ನು ಕಳೆಯಬಹುದಾಗಿದೆ. ಅಲ್ಲದೇ ಇಲ್ಲಿಗೆ ಸಮೀಪದಲ್ಲಿ ಹೊನ್ನಾವರದ ಬ್ಲೂಫ್ಲ್ಯಾಗ್ ಇಕೋ ಬೀಚ್, ಮ್ಯಾಂಗ್ರೋವ್ ಬೋರ್ಡ್ ವಾಕ್, ಗೋಕರ್ಣ ಸೇರಿದಂತೆ ಹತ್ತು ಹಲವು ಪ್ರವಾಸಿ ತಾಣಗಳೂ ಇರುವುದರಿಂದ ಒಂದೊಳ್ಳೆ ಟೂರ್ ಪ್ಯಾಕೇಜ್ ಮುಗಿಸಿಕೊಂಡು ಹೋಗಬಹುದು.
ಒಟ್ಟಾರೆ, ದೀಪಾವಳಿ ಹಬ್ಬದ ರಜೆಯ ನಡುವೆ ಪ್ರವಾಸಿ ತಾಣಗಳಿಗೆ ಜನರು ಲಗ್ಗೆಯಿಟ್ಟು ಹಬ್ಬದ ರಜೆಯನ್ನು ಮಜವಾಗಿ ಕಳೆಯಲು ಮುಂದಾಗಿದ್ದು, ಪ್ರವಾಸಿತಾಣಗಳು ಹೌಸ್ ಫುಲ್ ಆಗಿವೆ. ನೀವೂ ಸಹ ಕುಟುಂಬದವರೊಂದಿಗೆ ಎಲ್ಲಿಗೆ ಹೋಗೋದು ಅಂತಾ ಯೋಚಿಸ್ತಾ ಇದ್ರೆ ಮುರುಡೇಶ್ವರಕ್ಕೊಮ್ಮೆ ಭೇಟಿ ನೀಡಿ.
ಇದನ್ನೂ ಓದಿ: ಭೂಮಿ ಮೇಲಿನ ಸ್ವರ್ಗದಂತಿದೆ ಕೊಡಗಿನ ಈ ಪ್ರವಾಸಿ ತಾಣ.. ನೀವು ಒಮ್ಮೆ ಭೇಟಿ ನೀಡಿ