ಶಿರಸಿ: ಯಲ್ಲಾಪುರದ ಅತೃಪ್ತ ಶಾಸಕ ಶಿವರಾಮ್ ಹೆಬ್ಬಾರ್ ರಾಜೀನಾಮೆ ನೀಡಿ ಪಕ್ಷದ ವಿರುದ್ಧ ಬಂಡಾಯ ಎದ್ದಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್, ಶಾಸಕರ ಮನೆಯ ಮುಂದೆ ಪ್ರತಿಭಟನೆಗೆ ಕರೆ ನೀಡಿತ್ತು. ಆದರೆ ಯಾವೊಬ್ಬ ಕಾರ್ಯಕರ್ತ ಪ್ರತಿಭಟನೆಗೆ ಬಾರದೆ ಕೈ ಕೊಟ್ಟಿದ್ದಾರೆ. ಈ ಮೂಲಕ ಜಿಲ್ಲಾ ಕಾಂಗ್ರೆಸ್ನಲ್ಲಿಯೂ ಕಾರ್ಯಕರ್ತರು ಹಾಗೂ ನಾಯಕರು ಬಂಡಾಯವೇಳುವ ಮುನ್ಸೂಚನೆ ದೊರೆತಂತಾಗಿದೆ.
ಇಂದು ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಅವರ ನಿವಾಸದ ಮುಂದೆ ಪ್ರತಿಭಟೆನೆಗೆ ಮುಂದಾಗಿದ್ದ ಜಿಲ್ಲಾ ಕಾಂಗ್ರೆಸ್, ಮೊದಲು 11 ಗಂಟೆಗೆ ಪ್ರತಿಭಟನೆಗೆ ಸಮಯ ನಿಗದಿ ಮಾಡಿತ್ತು. ಆದ ಕಾರಣ ಶಾಸಕರ ಮನೆಯ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ಸಹ ಕಲ್ಪಿಸಲಾಗಿತ್ತು. ಆದರೆ, ನಿಗದಿತ ಸಮಯದಲ್ಲಿ ಕಾರ್ಯಕರ್ತರು ಬಾರದೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು 12 ಗಂಟೆಗೆ ಮುಂದೂಡಲಾಯಿತು. ಆದರೆ ಆ ಸಮಯದಲ್ಲೂ ಬಾರದ ಹಿನ್ನೆಲೆ ಪ್ರತಿಭಟನೆಯನ್ನು ಕೊನೆಗೆ ವಿಧಿಯಿಲ್ಲದೆ ಕೈ ಬಿಡಲಾಯಿತು.
ಪ್ರತಿಭಟನೆ ನಡೆಯದ ಹಿನ್ನೆಲೆ ಮನೆಯ ಮೇಲೆ ಇರುವ ಶಾಸಕರ ಕಚೇರಿಗೆ ತೆರಳಿದ ಜಿಲ್ಲಾ ಕಾಂಗ್ರೆಸ್ ಪ್ರಮುಖರು, ಸೆಕ್ರೆಟರಿ ಬಳಿ ಮಾತನಾಡಿ ಶಾಸಕರಿಗೆ ತಾವು ಬಂದಿರುವ ವಿಚಾರ ತಿಳಿಸುವಂತೆ ಹೇಳಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ಅಭಿವೃದ್ಧಿ ವಿಚಾರವಾಗಿ ಕ್ಷೇತ್ರದ ಜನರೊಂದಿಗೆ ಕೈ ಜೋಡಿಸಲು ಮನವಿ ಮಾಡಲು ಬಂದಿದ್ದೆವು. 5 ವರ್ಷ ಅಧಿಕಾರ ಮಾಡಲು ಹಸ್ತ ಚಿನ್ಹೆಗೆ ಜನ ಮತ ನೀಡಿದ್ದು, ಏನೇ ಭಿನ್ನಾಭಿಪ್ರಾಯ ಇದ್ದರೂ ಸರಿಪಡಿಸಿಕೊಂಡು ಮುನ್ನಡೆದುಕೊಂಡು ಹೋಗೋಣ ಎಂದು ಹೇಳಲು ಬಂದಿದ್ದೆವು ಎಂದರು.