ಉತ್ತರಕನ್ನಡ : ಜಿಲ್ಲೆಯು ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಜಿಲ್ಲೆಯಲ್ಲಿ ಹತ್ತಕ್ಕೂ ಅಧಿಕ ಪ್ರವಾಸಿತಾಣಗಳಿವೆ. ಜಲಸಾಹಸ ಕ್ರೀಡೆಗಳಿಗೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಲ ಕ್ರೀಡೆಗಳಿಗೆ ಬ್ರೇಕ್ ಹಾಕಿದ್ದು, ಪ್ರವಾಸೋದ್ಯಮವನ್ನೇ ಅವಲಂಬಿಸಿರುವವರಿಗೆ ಸಂಕಷ್ಟ ಎದುರಾಗಿದೆ.
ಒಂದೆಡೆ ಮೈದುಂಬಿ ಶಾಂತವಾಗಿ ಹರಿಯುವ ನದಿ, ಇನ್ನೊಂದೆಡೆ ಹಚ್ಚ ಹಸಿರಿನಿಂದ ಕೂಡಿರುವ ಸುಂದರ ಪರಿಸರ, ಇಂತಹ ಅದ್ಭುತ ಲೋಕದಲ್ಲಿ ದೋಣಿ ವಿಹಾರ ಮಾಡೋದು ಅಂದ್ರೆ ಯಾರಿಗೆ ತಾನೇ ಇಷ್ಟ ಆಗೋಲ್ಲ ಹೇಳಿ. ಇದಕ್ಕೆ ಹೇಳಿ ಮಾಡಿಸಿದಂತೆ ಇರುವ ಪ್ರದೇಶ ಅಂದ್ರೆ ಅದು ಉತ್ತರಕನ್ನಡ ಜಿಲ್ಲೆಯ ದಾಂಡೇಲಿ.
ಇಲ್ಲಿ ಹರಿಯುವ ಕಾಳಿ ನದಿಯಲ್ಲಿ ಕಯಾಕಿಂಗ್, ರಿವರ್ ರ್ಯಾಫ್ಟಿಂಗ್ ಮಾಡೋದಕ್ಕೆ ದೂರದೂರುಗಳಿಂದ ಪ್ರವಾಸಿಗರು ಮುಗಿ ಬೀಳುತ್ತಾರೆ. ಆದರೆ, ಪ್ರವಾಸಿಗರು ಹೆಚ್ಚು ಭೇಟಿ ನೀಡುವ ಸಂದರ್ಭದಲ್ಲಿ ಜಿಲ್ಲಾಡಳಿತ ಇದೀಗ ಜಲಸಾಹಸ ಕ್ರೀಡೆಗಳನ್ನು ನಿಷೇಧಿಸುವಂತೆ ಆದೇಶ ಮಾಡಿದೆ.
ಕೊರೊನಾ ಅಬ್ಬರ ಹೆಚ್ಚಾಗಿರುವ ಹಿನ್ನೆಲೆ ಉತ್ತರಕನ್ನಡ ಜಿಲ್ಲಾಡಳಿತ ಜಲಸಾಹಸ ಕ್ರೀಡೆಗಳ ಮೇಲೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಹೊರಗಿನಿಂದ ಜಿಲ್ಲೆಗೆ ಬರುವ ಪ್ರವಾಸಿಗರು ಹಾಗೂ ಸ್ಥಳೀಯರ ಆರೋಗ್ಯದ ಹಿತದೃಷ್ಟಿಯಿಂದ ಜಲಸಾಹಸ ಕ್ರೀಡೆಗಳನ್ನು ನಡೆಸದಂತೆ ಈಗಾಗಲೇ ರೆಸಾರ್ಟ್ ಮಾಲೀಕರಿಗೆ ಸೂಚನೆ ನೀಡಿದೆ. ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ನಿಗಾ ಇರಿಸಲು ಆದೇಶಿಸಿದ್ದು, ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ದಾಂಡೇಲಿಯ ಕಾಳಿ ನದಿ ತೀರದಲ್ಲಿ ಸುಮಾರು 80ಕ್ಕೂ ಅಧಿಕ ರೆಸಾರ್ಟ್, ಹೋಂಸ್ಟೇಗಳಿದ್ದು, ಇವು ಪ್ರವಾಸಿಗರನ್ನು ಅವಲಂಬಿಸಿವೆ. ಜಲಸಾಹಸ ಕ್ರೀಡೆಗಳನ್ನು ಆಡುವ ಉದ್ದೇಶದಿಂದ ಬರುವ ಪ್ರವಾಸಿಗರು ಹೆಚ್ಚಾಗಿ ರೆಸಾರ್ಟ್‌ಗಳಲ್ಲಿ ತಂಗುತ್ತಾರೆ. ಇದರಿಂದ ಒಂದಿಷ್ಟು ಲಾಭವಾಗುತ್ತಿತ್ತು.
ಆದರೆ, ಇದೀಗ ಜಲಸಾಹಸ ಕ್ರೀಡೆಗಳನ್ನು ಬಂದ್ ಮಾಡಿದಲ್ಲಿ ಪ್ರವಾಸಿಗರು ಆಗಮಿಸುವುದಿಲ್ಲ. ಕಳೆದ ಒಂದೂವರೆ ವರ್ಷದಿಂದ ರೆಸಾರ್ಟ್‌ಗಳು ನಷ್ಟ ಅನುಭವಿಸುತ್ತಿವೆ. ಹೀಗಾಗಿ, ಕೊರೊನಾ ಮಾರ್ಗಸೂಚಿ ಪಾಲನೆಯೊಂದಿಗೆ ಜಲಸಾಹಸ ಕ್ರೀಡೆಗಳಿಗೆ ಅನುಮತಿ ನೀಡಬೇಕು ಎಂದು ರೆಸಾರ್ಟ್ ಮಾಲೀಕರು ಮನವಿ ಮಾಡಿದ್ದಾರೆ. ಜಲಸಾಹಸ ಕ್ರೀಡೆಗಳೇ ಪ್ರವಾಸೋದ್ಯಮದ ಜೀವಾಳ. ಜಿಲ್ಲಾಡಳಿತ ರೆಸಾರ್ಟ್, ಹೋಂ ಸ್ಟೇ ಮಾಲೀಕರ ಬೇಡಿಕೆಗೆ ಸ್ಪಂದಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಓದಿ: ರಾಜಕೀಯ ಜಂಜಾಟ ಬದಿಗಿಟ್ಟು ಕುಟುಂಬ ಸಮೇತ ವಿದೇಶ ಪ್ರವಾಸಕ್ಕೆ ತೆರಳಿದ್ರಾ ಮಾಜಿ ಸಿಎಂ ಬಿಎಸ್ವೈ!?