ಶಿರಸಿ: ಅನರ್ಹ ಶಾಸಕರು ಈಗ ಮತದಾರರ ಮುಂದೆ ತೆರಳಿ ಭಾವನಾತ್ಮಕ ದಾಳ ಉರುಳಿಸಿ ಉಪಚುನಾವಣೆ ಗೆಲುವಿಗೆ ಲೆಕ್ಕ ಹಾಕುತ್ತಿದ್ದಾರೆ. ಯಲ್ಲಾಪುರ ಕ್ಷೇತ್ರದ ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ಮತದಾರರ ಬಳಿ ತೆರಳಿ ಮಾಡಿದ ತಪ್ಪಿಗೆ ಕ್ಷಮೆ ಯಾಚಿಸಿದ್ದಲ್ಲದೇ, ತನ್ನ ಜೊತೆ ಬರುವ ಎಲ್ಲರನ್ನೂ ಕೈಹಿಡಿಯುವುದಾಗಿ ಭರವಸೆ ಕೂಡ ನೀಡ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಕೈ ಶಾಸಕರಾಗಿದ್ದ ಶಿವರಾಮ ಹೆಬ್ಬಾರ ಕ್ಷೇತ್ರಾದ್ಯಂತ ಓಡಾಡಿ ತಮ್ಮ ನಿರ್ಧಾರದ ಬಗ್ಗೆ ಜನರಿಗೆ ತಿಳಿಸಿ, ಕ್ಷಮೆ ಕೇಳಿ, ಮುಂದಿನ ಹೋರಾಟಕ್ಕೆ ಬೆಂಬಲ ಸೂಚಿಸುವಂತೆ ಕೋರುತ್ತಿದಾರೆ. ಸುಪ್ರೀಂ ತೀರ್ಮಾನ ಬಂದ ನಂತರ ಹೊಸ ಹೆಜ್ಜೆ ಇಡೋದಾಗಿ ಹೇಳ್ತಿರೋ ಹೆಬ್ಬಾರ್, ನನ್ನ ಜೊತೆ ಬಂದ್ರೆ ಯಾರನ್ನೂ ಕೈ ಬಿಡೋದಿಲ್ಲ. ನಾನು ಧರ್ಮದ ಮೇಲೆ, ಜಾತಿ ಮೇಲೆ ರಾಜಕಾರಣ ಮಾಡಿಲ್ಲ ಎಂದು ಹೇಳಿದರು.
ಯಲ್ಲಾಪುರ, ಮುಂಡಗೋಡ ಹಾಗೂ ಬನವಾಸಿ ಹೀಗೆ ತಮ್ಮ ಕ್ಷೇತ್ರದ ಎಲ್ಲ ಕಾರ್ಯಕರ್ತರನ್ನು ಭೇಟಿ ಮಾಡಿ ಅವರಿಗೆ ಸಮಾಧಾನ ಹೇಳಿದ್ದಾರೆ. ಅಲ್ಲದೇ ಸುಪ್ರೀಂ ತೀರ್ಪಿನ ನಂತರ ಇನ್ನಷ್ಟು ಹೆಚ್ಚಿನ ಬೆಂಬಲಿಗರು ಬರಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.