ಕಾರವಾರ: ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿಯ ಕಡಲತೀರದಲ್ಲಿ ಇವತ್ತು ನಡೆದ ಜಾತ್ರೆ ಬೇರೆಲ್ಲಾ ಜಾತ್ರೆಗಳಿಗಿಂತ ವಿಭಿನ್ನವಾಗಿತ್ತು. ಸಮುದ್ರತೀರಕ್ಕೆ ದೇವರುಗಳನ್ನು ಪಲ್ಲಕ್ಕಿ ಮೆರವಣಿಗೆ ಮೂಲಕ ತಂದು ಪೂಜೆ ಸಲ್ಲಿಸಿದ್ದು ಒಂದೆಡೆಯಾದ್ರೆ, ಇನ್ನೊಂದೆಡೆ ಜಾತ್ರೆಗೆ ಆಗಮಿಸಿದ ಭಕ್ತರು ದೇವರ ದರ್ಶನದ ಜೊತೆಗೆ ಸಮುದ್ರಸ್ನಾನ ಮಾಡುವ ಮೂಲಕ ಹಬ್ಬ ಆಚರಿಸಿದರು.
ಪ್ರತಿವರ್ಷದಂತೆ ಈ ವರ್ಷ ಸಹ ಗಾಂವಗೇರಿಯಲ್ಲಿನ ರಾಮನಾಥ ದೇವರ ಜಾತ್ರಾ ಮಹೋತ್ಸವ ಇಂದು ನಡೆಯಿತು. ಶಿವರಾತ್ರಿಯ ಮಾರನೇ ದಿನ ಅಥವಾ ಶಿವರಾತ್ರಿ ನಂತರ ಬರುವ ಅಮವಾಸ್ಯೆಯ ದಿನ ರಾಮನಾಥ ದೇವರ ಜಾತ್ರಾ ಮಹೋತ್ಸವ ನಡೆಯುತ್ತದೆ. ಈ ಜಾತ್ರೆಯಲ್ಲಿ ಈ ಭಾಗದ ಅಸ್ನೋಟಿ, ಮಾಜಾಳಿ, ಕೃಷ್ಣಾಪುರ, ಚಿತ್ತಾಕುಲ, ಮುಡಿಗೇರಿ, ಹೊಸಳ್ಳಿ ಗ್ರಾಮಗಳಿಂದ ಬೇರೆಬೇರೆ ದೇವರುಗಳನ್ನ ಪಲ್ಲಕ್ಕಿಯಲ್ಲಿ ಕಡಲತೀರಕ್ಕೆ ತರಲಾಗುತ್ತದೆ.
ಬಳಿಕ ಪಲ್ಲಕ್ಕಿಯಲ್ಲಿನ ದೇವರನ್ನು ಸಮುದ್ರದಲ್ಲಿ ಸ್ನಾನ ಮಾಡಿಸುವುದು ಇಲ್ಲಿನ ವಿಶೇಷ. ಅದರಂತೆ ಈ ಬಾರಿ ಸಹ ಪಲ್ಲಕ್ಕಿಯಲ್ಲಿ ತಂದ ಏಳು ಗ್ರಾಮದ ದೇವರುಗಳಿಗೆ ಸಮುದ್ರದ ನೀರನ್ನು ಹಾಕಿ ಸ್ನಾನ ಮಾಡಿಸಿ ದರ್ಶನಕ್ಕೆ ಇರಿಸಲಾಯಿತು. ಜಾತ್ರೆಗೆ ಬಂದಂತಹ ಭಕ್ತರು ಸಮುದ್ರಸ್ನಾನ ಮಾಡಿ ಪಲ್ಲಕ್ಕಿಯಲ್ಲಿನ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಶಿವರಾತ್ರಿ ಆಚರಣೆಯನ್ನು ಮುಕ್ತಾಯಗೊಳಿಸಿದರು.
ಇನ್ನು ಗಾಂವಗೇರಿಯಲ್ಲಿ ನಡೆಯುವ ಈ ರಾಮನಾಥ ದೇವರ ಜಾತ್ರಾ ಮಹೋತ್ಸವದಲ್ಲಿ ಗೋವಾ, ಮಹಾರಾಷ್ಟ್ರ, ಸೇರಿದಂತೆ ವಿವಿಧ ಭಾಗಗಳಿಂದ ಸಹ ಭಕ್ತರು ಆಗಮಿಸಿ ಪಾಲ್ಗೊಳ್ಳುತ್ತಾರೆ. ಶಿವರಾತ್ರಿಯ ದಿನದಂದು ಉಪವಾಸ ಮಾಡಿ ನಂತರ ಸಮುದ್ರಸ್ನಾನ ಮಾಡುವ ಮೂಲಕ ಉಪವಾಸ ಬಿಡುವುದು ಸಹ ಈ ಜಾತ್ರೆಯ ವಿಶೇಷ.
ಅಲ್ಲದೆ, ಸಮುದ್ರ ಸ್ನಾನಗಳಿಂದ ಪಾಪಗಳು ತೊಳೆದು, ರೋಗ ರುಜಿನಗಳು ದೂರವಾಗುತ್ತವೆ ಎನ್ನುವ ನಂಬಿಕೆ ಇದೆ. ಜೊತೆಗೆ ಮೃತರಾದ ಹಿರಿಯರಿಗೆ ಇದೇ ಸಂದರ್ಭದಲ್ಲಿ ಕಡಲತೀರದಲ್ಲಿ ಪಿಂಡ ಪ್ರಧಾನವನ್ನ ಮಾಡಲಾಗುತ್ತದೆ. ಹಾಗೂ ಸಮುದ್ರಸ್ನಾನ ಮಾಡಿ ವಾಪಸ್ ತೆರಳುವ ವೇಳೆ ರಸ್ತೆ ಬದಿಯಲ್ಲಿ ಹಾಕಲಾಗುವ ಬಟ್ಟೆಯ ಮೇಲೆ ಪಡಿ ಅಂದರೆ ಅಕ್ಕಿ ಹಾಕಲಾಗುತ್ತದೆ.
ಇದರಿಂದ ಹಿರಿಯರಿಗೆ ಮುಕ್ತಿ ಸಿಗುತ್ತದೆ ಎನ್ನುವ ನಂಬಿಕೆ ಇಲ್ಲಿನವರದ್ದು. ಇನ್ನು ಕಳೆದೆರಡು ವರ್ಷಗಳಿಂದ ಕೊರೊನಾ ಹಿನ್ನಲೆ ಹಬ್ಬವನ್ನ ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಕೊರೊನಾ ಕಡಿಮೆಯಾಗಿರುವ ಹಿನ್ನಲೆ ಜಾತ್ರೆ ಉತ್ತಮವಾಗಿ ನೆರವೇರಿದೆ ಅಂತಾರೇ ಸ್ಥಳೀಯರು.
ಇನ್ನು ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುವುದರಿಂದ ಸಮುದ್ರದಲ್ಲಿ ಸ್ನಾನ ಮಾಡುವಾಗ ಯಾವುದೇ ಅವಘಡ ಆಗದಂತೆ ಪೊಲೀಸರು, ಕೊಸ್ಟ್‌ಗಾರ್ಡ್ ಸಿಬ್ಬಂದಿ ಕಟ್ಟೆಚ್ಚರವಹಿಸಿದ್ದರು. ಒಟ್ಟಿನಲ್ಲಿ ಮಾಜಾಳಿಯ ರಾಮನಾಥ ದೇವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿದ್ದು, ಸಾಮೂಹಿಕ ಸಮುದ್ರಸ್ನಾನದ ಜೊತೆಗೆ ವಿವಿಧ ಆಚರಣೆಗಳೊಂದಿಗೆ ಇದು ವಿಭಿನ್ನ ಜಾತ್ರೆಯಾಗಿರೋದಂತೂ ಸತ್ಯ.
ಇದನ್ನೂ ಓದಿ: ದುಡಿಯುವ ವರ್ಗಕ್ಕೆ ಬಜೆಟ್ನಲ್ಲಿ ನ್ಯಾಯಯುತ ಅನುದಾನ ನೀಡುವಂತೆ ಸಿಎಂಗೆ ಸಿದ್ದರಾಮಯ್ಯ ಒತ್ತಾಯ