ಕಾರವಾರ: ಕಾಂಗ್ರೆಸ್ ನೇತೃತ್ವದ ಸರ್ಕಾರ ಚುನಾವಣೆ ಪೂರ್ವ ಘೋಷಣೆಯಂತೆ 'ಶಕ್ತಿ ಯೋಜನೆ'ಗೆ ನಿನ್ನೆ (ಭಾನುವಾರ) ಚಾಲನೆ ನೀಡಿದೆ. ರಾಜ್ಯಾದ್ಯಂತ ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಯೋಜನೆಗೆ ಅಳವಡಿಸಿದ ಷರತ್ತು ಇದೀಗ ಗಡಿ ಜಿಲ್ಲೆ ಮಹಿಳೆಯರು ಉಚಿತ ಪ್ರಯಾಣದಿಂದ ವಂಚಿತರಾಗುವಂತಾಗಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೆ ಐದು ಗ್ಯಾರಂಟಿಗಳ ಪೈಕಿ ಮೊದಲು ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಚಾಲನೆ ನೀಡಲಾಗಿದೆ. ಈ ಮೂಲಕ ಮಹಿಳೆಯರು ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ. ಆದರೆ, ಸರ್ಕಾರ ಅಂತರ್ ರಾಜ್ಯಗಳಿಗೆ ತೆರಳುವ ಬಸ್ಗಳಿಗೆ ಉಚಿತ ಪ್ರಯಾಣ ನಿರ್ಬಂಧಿಸಿದ್ದು, ಇದೀಗ ಯೋಜನೆ ಲಾಭದಿಂದ ಗಡಿ ಜಿಲ್ಲೆಯ ಮಹಿಳೆಯರು ವಂಚಿತರಾಗುವಂತಾಗಿದೆ.
ಶಕ್ತಿ ಯೋಜನೆ ಪ್ರಕಾರ ರಾಜ್ಯದ ಸೆಮಿ ಡಿಲಕ್ಸ್ ಮತ್ತು ಡಿಲಕ್ಸ್ ಬಸ್ಗಳನ್ನು ಹೊರತುಪಡಿಸಿ ಎಲ್ಲ ಬಸ್ಗಳಲ್ಲೂ ರಾಜ್ಯದ ಮಹಿಳೆಯರಿಗೆ ಪ್ರಯಾಣ ಉಚಿತವಿದೆ. ಆದರೆ, ಈ ಯೋಜನೆಯಲ್ಲಿ ಷರತ್ತೊಂದನ್ನು ವಿಧಿಸಿದ್ದು, ಮೀರಜ್ ಮತ್ತು ಕೊಲ್ಲಾಪುರ ಸಾರಿಗೆಗಳನ್ನು ಹೊರತುಪಡಿಸಿ ಉಳಿದ ಯಾವುದೇ ಅಂತಾರಾಜ್ಯ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿಲ್ಲ. ಆದರೆ, ಉತ್ತರ ಕನ್ನಡ, ಬೆಳಗಾವಿ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳು ಗೋವಾ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ.
ಹೀಗಾಗಿ ಗಡಿ ಜಿಲ್ಲೆಗಳಿಗೆ ಬರುವ ಬಹುತೇಕ ಬಸ್ಗಳು ಗಡಿ ರಾಜ್ಯಗಳ ಪ್ರಮುಖ ನಿಲ್ದಾಣಗಳಲ್ಲಿ ಕೊನೆಯ ನಿಲುಗಡೆಯನ್ನು ಹೊಂದಿವೆ. ಹೀಗಾಗಿ 'ಶಕ್ತಿ ಯೋಜನೆ'ಯ ಪ್ರಕಾರ ಇಂತಹ ಬಸ್ಗಳನ್ನು ಅಂತಾರಾಜ್ಯ ಬಸ್ಗಳು ಎಂದು ಪರಿಗಣಿಸಲಾಗಿದೆ. ಈ ಬಸ್ಗಳಲ್ಲಿ ಉಚಿತ ಪ್ರಯಾಣವಿಲ್ಲ. ಈ ಬಗ್ಗೆ ಈಗಾಗಲೇ ಸಾರಿಗೆ ಬಸ್ಗಳಲ್ಲಿ ಸ್ಟಿಕರ್ಗಳನ್ನೂ ಅಂಟಿಸಲಾಗಿದೆ.
"ಉತ್ತರ ಕನ್ನಡ, ಬೆಳಗಾವಿ ಭಾಗದಿಂದ ಹೆಚ್ಚಿನ ಜನ ಉದ್ಯೋಗಕ್ಕಾಗಿ ಗಡಿ ರಾಜ್ಯಗಳಾದ ಗೋವಾ, ಮಹಾರಾಷ್ಟ್ರಕ್ಕೆ ತೆರಳುತ್ತಾರೆ. ಆದರೆ, ಹೀಗೆ ತೆರಳುವವರು ಇದೀಗ 'ಶಕ್ತಿ ಯೋಜನೆ'ಯಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರ ಹೊರ ರಾಜ್ಯದಲ್ಲಿ ಟಿಕೆಟ್ ಹಣ ಪಡೆಯಲಿ. ಆದರೆ ರಾಜ್ಯದ ಗಡಿಯವರೆಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕು.
ಅದರಲ್ಲಿಯೂ ಗಡಿ ಭಾಗದ ಜಿಲ್ಲೆಗಳಲ್ಲಿ ಬಹುತೇಕ ಬಸ್ ಗಳು ಅಂತರಾಜ್ಯಕ್ಕೆ ಹೋಗಿ ಬರುವುದರಿಂದ ಗಡಿಭಾಗದ ಬಹುತೇಕ ಮಹಿಳೆಯರಿಗೆ ಯೋಜನೆ ಲಾಭವೇ ಸಿಗದಂತಾಗುತ್ತದೆ. ಅದರಲ್ಲಿಯೂ ಜಿಲ್ಲೆಯಿಂದ ಸಾಕಷ್ಟು ಮಹಿಳೆಯರು ಗೋವಾಗಳಿಗೆ ಕೆಲಸಗಳಿಗೆ ತೆರಳುವುದರಿಂದ ಅಂತವರಿಗೆ ಇದರ ಲಾಭ ಸಿಗಬೇಕಾಗಿದೆ. ಹೀಗಾಗಿ ಸರ್ಕಾರ ಈ ಬಗ್ಗೆ ಗಮನಹರಿಸಿ, ಷರತ್ತು ಸಡಿಲಿಕೆಗೆ ಪ್ರಯತ್ನಿಸಬೇಕು" ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಆಗ್ರಹಿಸಿದ್ದಾರೆ.
ಈ ಬಗ್ಗೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರನ್ನ ಕೇಳಿದರೆ ಮಾಧ್ಯಮದವರನ್ನೇ ಪ್ರಶ್ನಿಸಿ ಎಂದಿದ್ದಾರೆ. ನೀವು ಮೋದಿಯವರಿಗೆ ಒತ್ತಡ ತನ್ನಿ ಎಂದಿದ್ದಾರೆ. ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಒದಗಿಸುವ ಶಕ್ತಿ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾದರಿಯಾಗಿ ಪರಿಗಣಿಸಿ ದೇಶವ್ಯಾಪಿ ಜಾರಿಗೆ ತರಲಿ' ಎಂದು ಅವರು ಹೇಳಿದರು.
ಇದನ್ನೂ ಓದಿ: ಉಚಿತವಾಗಿ ಪ್ರಯಾಣಿಸುವ ಮುನ್ನ ನಮಸ್ಕರಿಸಿ ಬಸ್ ಹತ್ತಿದ ತಾಯಿ.. ಬಹುಕಾಲ ನೆನಪಿನಲ್ಲಿ ಉಳಿಯುವ ಚಿತ್ರವಿದು ಎಂದ ಸಿಎಂ