ಕಾರವಾರ : ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಂಕೋಲಾ-ಕಾರವಾರ ಕ್ಷೇತ್ರದಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಶಾಸಕಿ ರೂಪಾಲಿ ನಾಯ್ಕ ಇಂದು ಜೀವನಾವಶ್ಯ ವಸ್ತುಗಳ ಕಿಟ್ ವಿತರಣೆ ಮಾಡಿದರು. ನಗರದ ದೈವಜ್ಞ ಸಭಾ ಭವನದಲ್ಲಿ ಇಂದು ಆಟೋ ಚಾಲಕರು, ಗೂಡಂಗಡಿಕಾರರು, ಪಡಿತರ ಚೀಟಿ ಇಲ್ಲದವರು ಸೇರಿ ಬಡತನದಲ್ಲಿದ್ದವರಿಗೆ 8 ಕೆಜಿ ಅಕ್ಕಿ, 1 ಕೆಜಿ ಬೇಳೆ, 1ಕೆಜಿ ಅಡುಗೆ ಎಣ್ಣೆ, ಅರಿಶಿನ, ಮೆಣಸಿನ ಪುಡಿ, ತರಕಾರಿ ಇರುವ ಕಿಟ್ ವಿತರಣೆ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ, ಕಾರವಾರ ಹಾಗೂ ಅಂಕೋಲಾದಲ್ಲಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಪೂರ್ಣ ಬಂದ್ ಆಗಿದೆ. ಜಿಲ್ಲಾಡಳಿತ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುತ್ತಿದೆ. ಆದರೂ ಕೆಲವರಿಗೆ ಅಗತ್ಯ ವಸ್ತುಗಳು ಈ ವೇಳೆ ಅಗತ್ಯವಿದೆ. ಈ ಕಾರಣದಿಂದ ಜನರ ಕಷ್ಟಕ್ಕೆ ನೆರವಾಗುವ ನಿಟ್ಟಿನಲ್ಲಿ ಸುಮಾರು 10 ಸಾವಿರ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಕೊರೊನಾ ವೈರಸ್ ಬಗ್ಗೆ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಡಳಿತ, ವಿವಿಧ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಪ್ರಮುಖವಾಗಿ ಪೊಲೀಸರು ಹಗಲಿರುಳು ಶ್ರಮಿಸುತ್ತಿದ್ದಾರೆ. ಎಲ್ಲರೂ ಮನೆಯಲ್ಲಿಯೇ ಇದ್ದು ಕೊರೊನಾ ವೈರಸ್ ತಡೆಗೆ ಸಹಕಾರ ನೀಡುವಂತೆ ಇದೇ ವೇಳೆ ಶಾಸಕಿ ರೂಪಾಲಿ ನಾಯ್ಕ ಮನವಿ ಮಾಡಿದರು.