ಶಿರಸಿ: 4.23 ಕೋಟಿ ರೂ. ವೆಚ್ಚದಲ್ಲಿ ಶಿರಸಿಯಲ್ಲಿ ನಿರ್ಮಾಣವಾಗುತ್ತಿರುವ ಪೊಲೀಸ್ ಸಿಬ್ಬಂದಿ ವಸತಿ ಕಟ್ಟಡಗಳ ಕಾಮಗಾರಿ ವಿಳಂಬವಾಗುತ್ತಿದ್ದು, ಕಟ್ಟಡ ಸಿಗಬಹುದು ಎಂದು ಕಾಯುತ್ತಿರುವ ಸಿಬ್ಬಂದಿಗೆ ನಿರಾಸೆಯಾಗುತ್ತಿದೆ.
ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲ ಸೌಲಭ್ಯ ನಿಗಮದಿಂದ ಇಲ್ಲಿನ ಝೂ ಸರ್ಕಲ್ ಬಳಿ ನಿರ್ಮಾಣವಾಗುತ್ತಿರುವ ಶಿರಸಿ ವ್ಯಾಪ್ತಿಯ ಪೊಲೀಸರ ಗೃಹ ವಸತಿ ಕಟ್ಟಡಗಳ ಪೇಂಟಿಂಗ್ ಹಾಗೂ ಪ್ಲಂಬಿಂಗ್ ಸೇರಿದಂತೆ ಸಣ್ಣಪುಟ್ಟ ಕೆಲಸ ಬಾಕಿಯಿದ್ದು, ಗುತ್ತಿಗೆ ವಾಯ್ದೆ ಮುಗಿದು ತಿಂಗಳುಗಳು ಕಳೆದರೂ ಇನ್ನೂ ವಾಸಕ್ಕೆ ಲಭ್ಯವಾಗುತ್ತಿಲ್ಲ.
3 ಕಟ್ಟಡಗಳು ನಿರ್ಮಾಣವಾಗುತ್ತಿದ್ದು, ಅದರಲ್ಲಿ 24 ಪೊಲೀಸ್ ಕಾನ್ಸ್ಟೇಬಲ್ ಹಾಗೂ 2 ಪಿಎಸ್ಐ ಕೊಠಡಿಗಳು ತಲೆ ಎತ್ತಿ ನಿಂತಿವೆ. ಮೊದಲು ಸಿಂಗಲ್ ಬೆಡ್ ರೂಮ್ ಮನೆಗಳನ್ನು ನೀಡುತ್ತಿದ್ದರೂ ಈ ಬಾರಿ ಶಿರಸಿ ಪೊಲೀಸರಿಗೆ ಉತ್ತಮ ಸೌಲಭ್ಯ ಸಿಗಲಿದ್ದು, ಡಬಲ್ ಬೆಡ್ ರೂಮ್ ಹಾಗೂ ಬಾಲ್ಕನಿ ವ್ಯವಸ್ಥೆಯನ್ನು ಮಾಡಲಾಗಿದೆ. 2019 ರ ಮೇ 15ಕ್ಕೆ ಕಾಮಗಾರಿ ಮುಗಿಸಬೇಕು ಎಂಬ ಕಾಲಮಿತಿಯನ್ನು ಮೊದಲು ಹಾಕಿದ್ದರು. ಆದರೆ, ಮಧ್ಯದಲ್ಲಿ ಮಳೆ ಬಂದ ಕಾರಣ ಎರಡು ತಿಂಗಳು ಹೆಚ್ಚುವರಿ ಕಾಲಾವಕಾಶ ಪಡೆದುಕೊಂಡಿದ್ದು, ಈಗ ಹೆಚ್ಚುವರಿ ಗಡವು ಮುಗಿದರೂ ಸಹ ಕಟ್ಟಡ ಪೂರ್ಣಗೊಂಡಿಲ್ಲ ಎಂದು ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ.