ಭಟ್ಕಳ: ಕೊರೊನಾ ನಿಯಂತ್ರಣ ಮಾಡಲು ತಳಮಟ್ಟದ ಅಧಿಕಾರಿಗಳು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಂದ ಸಾಧ್ಯವಾಗಿದ್ದು, ಇನ್ನು ಮುಂದೆ ಇವರ ಜವಾಬ್ದಾರಿಯೂ ಹೆಚ್ಚಾಗಲಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ ಹೇಳಿದರು.
ಅವರು ಇಲ್ಲಿನ ಬಂದರು ರಸ್ತೆಯಲ್ಲಿರುವ ಕಮಲಾವತಿ & ಶಾನಭಾಗ ಸಭಾಭವನದಲ್ಲಿ ಕೋವಿಡ್-19 ಸಂಬಂಧಿಸಿದಂತೆ ಕಾವಲು ಸಮಿತಿಗೆ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸೋಂಕಿತರ ಚಿಕಿತ್ಸೆಗೆ ಕಾರವಾರದಲ್ಲಿನ ಮೆಡಿಕಲ್ ಕಾಲೇಜಿನಲ್ಲಿ ವ್ಯವಸ್ಥೆ ಇದ್ದು, ತಾಲೂಕಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಲ್ಲಿನ ತಪ್ಪು ಕಲ್ಪನೆ ಹೋಗಲಾಡಿಸಿ ಆರೋಗ್ಯ ಸರ್ವೆ ಮಾಡಿ ಸಮುದಾಯಕ್ಕೆ ಹರಡದಂತೆ ಎಚ್ಚರಿಕೆ ವಹಿಸುವುದರೊಂದಿಗೆ ಕಾನೂನು ಮೀರಿದರೆ ಪ್ರಕರಣ ದಾಖಲು ಮಾಡುವ ಕೆಲಸ ಇನ್ನು ಮುಂದಿನ ದಿನದಲ್ಲಿ ನಡೆಯಬೇಕು ಎಂದು ಸೂಚನೆ ನೀಡಿದರು.
80 ದಿನಗಳ ಲಾಕ್ಡೌನ್ನಲ್ಲಿ ಕೊರೊನಾ ಹತೋಟಿಗೆ ತರಲು ಎಲ್ಲ ತಳಮಟ್ಟದ ಅಧಿಕಾರಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಕಾರ್ಯ ಶ್ಲಾಘಿಸಿ ಅವರ ಬೆನ್ನು ತಟ್ಟಿ ಅವರನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿ. ಜಿಲ್ಲಾಧಿಕಾರಿಯಾಗಿ ನಾನು ಸಾಮಾನ್ಯವಾಗಿ ವಿಡಿಯೋ ಕಾನ್ಪರೆನ್ಸ್ ಮೂಲಕ ತಾಲೂಕು ಮಟ್ಟದ ಮೇಲಧಿಕಾರಿಗಳ ಗಮನಕ್ಕೆ ಸಲಹೆ, ಸೂಚನೆ ಸಹಿತ ಆದೇಶ ನೀಡಲಿದ್ದೇನೆ. ಅದರಂತೆ ತಳಮಟ್ಟದ ಅಧಿಕಾರಿಗಳು ಹಾಗೂ ಇನ್ನಿತರ ಕಾರ್ಯವೂ ಈ ಅವಧಿಯಲ್ಲಿ ಪ್ರಮುಖವಾಗಿದೆ. ಈ ತರಬೇತಿ ಕಾರ್ಯವು ಕೇವಲ ನಮ್ಮ ಸೂಚನೆಗೆ ಮಾತ್ರ ಸೀಮಿತವಾಗದೇ ಇದರಲ್ಲಿ ನಿಮ್ಮ ಸಲಹೆ ಕೂಡಾ ಬೇಕು ಎಂದರು.
ಹೆಚ್ಚಾಗಬೇಕಿದೆ ಸರ್ವೇ ಕಾರ್ಯ:
ಭಟ್ಕಳದಲ್ಲಿ ವ್ಯಾಪಕವಾದ ಆರೋಗ್ಯ ಸರ್ವೇ ನಡೆಯಬೇಕಿದ್ದು, ಅದರಿಂದಲೇ ಹೆಚ್ಚಿನ ಮಾಹಿತಿ ಅಧಿಕಾರಿಗಳಿಗೆ ಸಿಗಲಿದೆ. ಆದರೆ ಸರ್ವೇ ಸರಿಯಾಗಿ ನಡೆಯುವಲ್ಲಿ ಜನರು ಸಹಕಾರ ನೀಡುತ್ತಿಲ್ಲ. ತಪ್ಪು ಕಲ್ಪನೆಯಿಂದ ಮಾಹಿತಿ ಸಿಗುತ್ತಿಲ್ಲ ಎಂದರೆ ನಮ್ಮಲ್ಲಿನ ಸಾಮಾನ್ಯ ಪ್ರಜ್ಞೆ ಕಡಿಮೆ ಇದೆ ಎಂದರ್ಥ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೊರೊನಾ ಬಗೆಗಿನ ಅವಶ್ಯಕ ಮಾಹಿತಿ ನೀಡಿ ಉತ್ತಮ ರೀತಿಯಲ್ಲಿ ಸರ್ವೇ ಕಾರ್ಯ ಮಾಡಿ ಎಂದರು.
ವಿದೇಶದಿಂದ ಬಂದವರಿಗೆ ನಿರ್ಬಂಧವಿಲ್ಲ, ಆದೇಶ ಪಾಲನೆ ಅಗತ್ಯ:
ಸದ್ಯ ಹೊರ ರಾಜ್ಯ, ವಿದೇಶದಿಂದ ಭಟ್ಕಳಕ್ಕೆ ಜನರು ಬರುತ್ತಿದ್ದು, ಅವರಿಗೆ ಯಾವುದೇ ನಿರ್ಬಂಧ ಇಲ್ಲ. ಆದರೆ, ಕ್ವಾರಂಟೈನ್ ವಿಚಾರದಲ್ಲಿ ಸರಕಾರದ ಎಲ್ಲ ಸೂಚನೆ ಪಾಲನೆ ಮಾಡಲೇಬೇಕಿದೆ. ಯಾರಾದರೂ ಬೇರೆ ರಾಜ್ಯ, ವಿದೇಶದಿಂದ ಬಂದು ತಾಲೂಕು ಆಡಳಿತದಿಂದ ವಿಷಯ ಮುಚ್ಚಿಟ್ಟರೆ ನಿರ್ದಾಕ್ಷಿಣ್ಯವಾಗಿ ಅವರ ವಿರುದ್ದ ಪ್ರಕರಣ ದಾಖಲು ಮಾಡುತ್ತೇವೆ ಎಂದು ಹೇಳಿದರು.
ಈ ಸಂದರ್ಬದಲ್ಲಿ ತಹಶೀಲ್ದಾರ್ ಎಸ್. ರವಿಚಂದ್ರ, ಸಿಪಿಐ ದಿವಾಕರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಇದ್ದರು.