ಕಾರವಾರ: ಕೋವಿಡ್ ಲಸಿಕೆ ಪಡೆಯದವರಿಗೆ ಮನೆ ಮನೆಗೆ ತೆರಳಿ ಆರೋಗ್ಯ ಸಿಬ್ಬಂದಿ ಲಸಿಕೆ ಹಾಕುತ್ತಿದ್ದಾರೆ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲವರು ಸುಪ್ರೀಂಕೋರ್ಟ್ ನೋಟಿಸ್ ಒಂದನ್ನು ತಪ್ಪಾಗಿ ತಿಳಿದು ಆರೋಗ್ಯ ಸಿಬ್ಬಂದಿಗೆ ತೋರಿಸಿ ವಾಗ್ವಾದ ಮಾಡುತ್ತಿದ್ದು, ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ.
ಜಿಲ್ಲೆಯಲ್ಲಿ 9.97 ಲಕ್ಷ ಮಂದಿ ಶೇ 92.32ರಷ್ಟು ಮೊದಲ ಡೋಸ್ ಹಾಗು 6.66 ಲಕ್ಷ ಮಂದಿ ಶೇ 65ರಷ್ಟು 2ನೇ ಡೋಸ್ ಪಡೆದಿದ್ದಾರೆ. ಆದರೆ, ಮತದಾರರ ಪಟ್ಟಿಯಲ್ಲಿರುವಂತೆ 10.78 ಲಕ್ಷ ಮಂದಿಯ ಪೈಕಿ 82 ಸಾವಿರದಷ್ಟು ಜನರಿಗೆ ಮೊದಲ ಡೋಸ್, 3.50 ಲಕ್ಷ ಜನರಿಗೆ ಎರಡನೇ ಡೋಸ್ ನೀಡುವುದು ಬಾಕಿ ಇದೆ.
ಕೋವಿಡ್ ಲಸಿಕಾ ಕೇಂದ್ರಕ್ಕೆ ಆಗಮಿಸುವವರ ಸಂಖ್ಯೆ ಕಡಿಮೆಯಾಗಿದ್ದು ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ತೆರಳಿ ಕೋವಿಡ್ ಲಸಿಕೆ ನೀಡಲು ಮುಂದಾಗಿದೆ. ಆದರೆ ಈ ವೇಳೆ ಸುಪ್ರೀಂಕೋರ್ಟ್ ಆದೇಶವೊಂದನ್ನು ಹಿಡಿದು ಜಿಲ್ಲೆಯ ಜನತೆ ಮನೆ ಮನೆಗೆ ಲಸಿಕೆ ನೀಡುವಂತಿಲ್ಲ ಎಂದು ತಗಾದೆ ತೆಗೆಯುತ್ತಿದ್ದಾರಂತೆ.
ಸುಪ್ರೀಂಕೋರ್ಟ್ ಆದೇಶವೇನು?
ಸುಪ್ರೀಂಕೋರ್ಟ್ ಕಳೆದ ಮೇ ತಿಂಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹಾಗು ಸೌಲಭ್ಯ ವಂಚಿತ ಪ್ರದೇಶಗಳಲ್ಲಿರುವ ಜನತೆಗೆ ಮನೆ ಬಾಗಿಲಿಗೆ ತೆರಳಿ ಲಸಿಕೆ ನೀಡಬಹುದೇ? ಎಂದು ಕೇಂದ್ರ ಸರ್ಕಾರವನ್ನು ಕೇಳಿತ್ತು. ಈ ವೇಳೆ ಕೇಂದ್ರ ಸರ್ಕಾರ, ಕೋವಿಡ್ ಲಸಿಕೆಯನ್ನು ಮನೆ ಬಾಗಿಲಿಗೆ ತೆರಳಿ ನೀಡುವ ಪ್ರಸ್ತಾವನೆ ಇಲ್ಲ. ಕೇವಲ ನೋಂದಾಯಿತ ಕೇಂದ್ರಗಳಲ್ಲಿ ಮಾತ್ರ ಲಸಿಕೆ ನೀಡಲಾಗುತ್ತದೆ ಎಂದು ಹಲವು ಕಾರಣಗಳೊಂದಿಗೆ ತಿಳಿಸಿದೆ.
ಆ ಬಳಿಕ ಸೆಪ್ಟೆಂಬರ್ನಲ್ಲಿ, ವಿಶೇಷಚೇತನರು ಮತ್ತು ಸಮಾಜದ ದುರ್ಬಲ ವರ್ಗಗಳಿಗೆ ಸೇರಿದ ಜನರಿಗೆ ಮನೆ ಮನೆಗೆ ಕೋವಿಡ್ ಲಸಿಕೆ ನೀಡುವಂತೆ ಕೋರಿ ವಕೀಲರ ಸಂಸ್ಥೆ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದೆ. ಆದರೆ ಈ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ್ದ ಕೋರ್ಟ್, ಆರೋಗ್ಯ ಸಿಬ್ಬಂದಿ ಒತ್ತಡದಲ್ಲಿದ್ದಾರೆ. ಅಲ್ಲದೇ ದೇಶದ ಪರಿಸ್ಥಿತಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಿಭಿನ್ನವಾಗಿದ್ದು, ಈ ಕಾರಣದಿಂದ ಇದು ಸಾಧ್ಯವಿಲ್ಲ ಎಂದು ಹೇಳಿತ್ತು. ಈ ಬಗ್ಗೆ ವಿವಿಧ ಪತ್ರಿಕೆಗಳಲ್ಲಿ ಬಂದ ವರದಿಯನ್ನೇ ಕೆಲವರು ಹಿಡಿದುಕೊಂಡು, ಮನೆ ಮನೆಗೆ ಲಸಿಕೆ ನೀಡುವಂತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ ಎಂ.ಪಿ.ಮುಲೈ ಮುಹಿಲನ್, 'ಸುಪ್ರೀಂಕೋರ್ಟ್ ಮನೆ ಮನೆಗೆ ತೆರಳಿ ಲಸಿಕೆ ಕೊಡಬಾರದು ಎಂದು ಹೇಳಿಲ್ಲ. ಆ ಸಂದರ್ಭದಲ್ಲಿ ಅದು ಸಾಧ್ಯವಿಲ್ಲ ಎಂದಿತ್ತು. ಸರ್ಕಾರ ಅಂದು ಲಸಿಕೆ ಲಭ್ಯತೆಯಾಧಾರದಲ್ಲಿ ಕೋರ್ಟ್‌ಗೆ ಮನೆ ಮನೆಗೆ ಲಸಿಕೆ ಕಷ್ಟವೆಂದು ಅಂದು ಹೇಳಿತ್ತು. ಆದರೆ ಈಗ ಲಸಿಕೆ ಸಾಕಷ್ಟು ಲಭ್ಯತೆ ಇದೆ. ಹೀಗಾಗಿ ಮನೆ ಮನೆಗೆ ತೆರಳಿ ಲಸಿಕೆ ನೀಡಲಾಗುತ್ತಿದೆ' ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಚುನಾವಣೆ ವೇಳೆ ಕೋವಿಡ್ ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ: ಉ.ಕನ್ನಡ ಜಿಲ್ಲಾಧಿಕಾರಿ