ಕಾರವಾರ(ಉತ್ತರಕನ್ನಡ): ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಕಳೆದ ಐದು ದಿನಗಳ ಅವಧಿಯಲ್ಲೇ ದಿನಕ್ಕೆ ಹತ್ತಕ್ಕಿಂತ ಕಡಿಮೆ ಪ್ರಕರಣಗಳು ಬರುತ್ತಿದ್ದ ಜಿಲ್ಲೆಯಲ್ಲಿ ಇದೀಗ ಶತಕ ಬಾರಿಸಿದೆ. ಜಿಲ್ಲಾ ಕೇಂದ್ರ ಕಾರವಾರದಲ್ಲೇ ಅತೀ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, ಮೆಡಿಕಲ್ ಕಾಲೇಜು ಹಾಗೂ ನೌಕಾನೆಲೆಗಳಲ್ಲಿನ ವೈರಸ್ ಅಬ್ಬರವು ಆತಂಕ ಸೃಷ್ಟಿಸಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಜನವರಿ 4ರಂದು ಕೇವಲ ನಾಲ್ಕು ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇದಾದ ಮೂರು ದಿನಗಳ ಅಂತರದಲ್ಲೇ ಪಾಸಿಟಿವ್ ಪ್ರಕರಣಗಳ ಸಂಖ್ಯೆ 37ಕ್ಕೆ ಏರಿಕೆಯಾಗಿತ್ತು. ದಿನದಿಂದ ದಿನಕ್ಕೆ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಸದ್ಯ 414 ಸಕ್ರಿಯ ಕೊರೊನಾ ಪ್ರಕರಣಗಳಿದ್ದು, ಈ ಪೈಕಿ 180 ಮಂದಿ ಸೋಂಕಿತರು ಕಾರವಾರ ತಾಲೂಕಿನಲ್ಲೇ ಪತ್ತೆಯಾಗಿದ್ದಾರೆ.
ಆರೋಗ್ಯ ಇಲಾಖೆ ಮಾಹಿತಿಯಂತೆ ನಗರದ ಕ್ರಿಮ್ಸ್ ಆಸ್ಪತ್ರೆ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಕದಂಬ ನೌಕಾನೆಲೆಯ ಸಿಬ್ಬಂದಿಯಲ್ಲಿ ಹೆಚ್ಚು ಸೋಂಕು ಪ್ರಕರಣಗಳು ಕಂಡು ಬಂದಿವೆ.
ನೌಕಾನೆಲೆಗೆ ಉತ್ತರ ಪ್ರದೇಶದಿಂದ ಬಂದಿದ್ದ ಸುಮಾರು 30 ಮಂದಿ ನೌಕರರಲ್ಲಿ ಕೊರೊನಾ ದೃಢಪಟ್ಟಿದ್ದು, ಅವರನ್ನು ಪ್ರತ್ಯೇಕವಾಗಿ ಕ್ವಾರಂಟೈನ್‌ಗೆ ಒಳಪಡಿಸಿ ನೌಕಾನೆಲೆ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಮೆಡಿಕಲ್ ಕಾಲೇಜಿನ ವೈದ್ಯರು ಹಾಗೂ ವಿದ್ಯಾರ್ಥಿಗಳು ಸೇರಿ ಒಟ್ಟೂ 29 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಅವರನ್ನು ಸಹ ಕ್ವಾರಂಟೈನ್ ಮಾಡುವ ಮೂಲಕ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಅಂತಾ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶರದ್ ನಾಯಕ ತಿಳಿಸಿದ್ದಾರೆ.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ನೆರೆಯ ಗೋವಾಕ್ಕೆ ಹೋಗಿ ಬಂದವರಿಗೆ ಯಾವುದೇ ತಪಾಸಣೆಗೊಳಪಡಿಸದೇ ಜಿಲ್ಲೆಯೊಳಗೆ ಬರಲು ಬಿಟ್ಟಿದ್ದರಿಂದ ಕೋವಿಡ್ ಹೆಚ್ಚಳವಾಗುವ ಆತಂಕ ಎದುರಾಗಿತ್ತು. ಇದರ ಬೆನ್ನಲ್ಲೇ ಕಾರವಾರದಲ್ಲೇ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಅಲ್ಲದೇ ನೌಕಾನೆಲೆಯಲ್ಲಿ ಸೋಂಕು ಪತ್ತೆಯಾಗಿರುವ ಕಾರಣ ನಗರದಿಂದ ಅಲ್ಲಿಗೆ ತೆರಳುವ ಕಾರ್ಮಿಕರಿಗೂ ಸೂಕ್ತ ತಪಾಸಣೆ ನಡೆಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
ಇದನ್ನೂ ಓದಿ: ಲಕ್ಷದ್ವೀಪದಲ್ಲಿ 15 ರಿಂದ 18 ವರ್ಷದೊಳಗಿನವರಿಗೆ ಶೇ.100ರಷ್ಟು ಕೋವಿಡ್ ಲಸಿಕೆ ಪೂರ್ಣ