ಕಾರವಾರ: ರಾಜ್ಯದಲ್ಲಿ ಸದ್ಯ ಸರ್ಕಾರದ ಪ್ರತಿನಿಧಿಗಳು ಗುತ್ತಿಗೆದಾರರಿಂದ ಶೇಕಡಾ 40ರಷ್ಟು ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ ಎನ್ನುವ ಆರೋಪ ದೊಡ್ಡ ಸದ್ದು ಮಾಡುತ್ತಿದೆ. ಇದೇ ಕಮಿಷನ್ ವಿಚಾರದಲ್ಲಿ ಗುತ್ತಿಗೆದಾರನೋರ್ವ ಆತ್ಮಹತ್ಯೆ ಮಾಡಿಕೊಂಡ ವಿಚಾರದಲ್ಲಿ ಸಚಿವ ಈಶ್ವರಪ್ಪನವರ ತಲೆದಂಡ ಸಹ ಆಗಿದೆ. ಇನ್ನು ರಾಜ್ಯದಲ್ಲಿಯೇ ಜನಪ್ರತಿನಿಧಿಗಳು ಕೆಲಸಕ್ಕೆ ಕಮಿಷನ್ ಪಡೆಯುತ್ತಿದ್ದಾರೆ ಎಂದು ಕಾರವಾರದಲ್ಲಿಯೇ ಮೊದಲ ಹೋರಾಟ ಪ್ರಾರಂಭವಾಗಿತ್ತು.
ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ ಹಾಗೂ ಗುತ್ತಿಗೆದಾರರ ನಡುವೆ ಇದೇ ವಿಚಾರದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ಉಂಟಾಗಿ ನಗರದಲ್ಲಿ ಬೃಹತ್ ಪ್ರತಿಭಟನೆಯನ್ನು ಸಹ ಮಾಡಿದ್ದರು. ಇದೀಗ ಮತ್ತೆ ಶಾಸಕಿ ವಿರುದ್ದ ಕೆಲ ಗುತ್ತಿಗೆದಾರರು ತಿರುಗಿಬಿದ್ದಿದ್ದಾರೆ. ಶಾಸಕಿ ರೂಪಾಲಿ ನಾಯ್ಕ ಸಿಎಂ ವಿಶೇಷ ಅನುದಾನದಲ್ಲಿ ಬಿಡುಗಡೆಯಾದ ಕಾಮಗಾರಿಗಳನ್ನು ಕೆ.ಆರ್.ಡಿ.ಐ.ಎಲ್ ಗೆ ಕೊಡುವಂತೆ ಪತ್ರ ಬರೆದಿದ್ದಾರೆ.
ಪತ್ರ ಇಟ್ಟುಕೊಂಡು ಕೆ.ಆರ್.ಡಿ.ಐ.ಎಲ್ಗೆ ಕಾಮಗಾರಿ ಕೊಡುವಂತೆ ಶಾಸಕರು ಒತ್ತಡ ಹಾಕಿ ಭ್ರಷ್ಟಾಚಾರ ನಡೆಸಲು ಮುಂದಾಗಿದ್ದಾರೆ. ಕೆ.ಆರ್.ಡಿ.ಐ.ಎಲ್ನವರು ಕೆಲಸವನ್ನು ಗುತ್ತಿಗೆದಾರರಿಗೆ ಕೊಡುತ್ತಾರೆ. ನೇರವಾಗಿ ಗುತ್ತಿಗೆದಾರರಿಗೆ ಕೆಲಸ ಕೊಡುವ ಬದಲು ಕೆ.ಆರ್.ಡಿ.ಐ.ಎಲ್ ಗೆ ಕೊಡುವ ಮೂಲಕ ಭ್ರಷ್ಟಾಚಾರದ ಕೊಂಡಿಯಾಗಿ ಕೆ.ಆರ್.ಡಿಐ.ಎಲ್ ಬಳಸಿಕೊಳ್ಳಲು ಶಾಸಕರು ಮುಂದಾಗಿದ್ದಾರೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರೋಪ ಮಾಡಿದ್ದಾರೆ.
ಈ ಬಗ್ಗೆ ಶಾಸಕಿ ರೂಪಾಲಿ ನಾಯ್ಕ ಬಳಿ ಕೇಳಿದರೆ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯ್ಕ ಬ್ಲಾಕ್ಲಿಸ್ಟ್ನ ಕಳಪೆ ಗುತ್ತಿಗೆದಾರ. ಕಳಪೆ ಕಾಮಗಾರಿಗಳನ್ನು ಮಾಡಿ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಹೆದರಿಸಿಕೊಂಡು ದುಡ್ಡು ಮಾಡುವ ವ್ಯಕ್ತಿ. ತಾನು ಭ್ರಷ್ಟಾಚಾರ ಯಾವುದೇ ಕಾರಣಕ್ಕೂ ಮಾಡಿಲ್ಲ ಎಂದು ಹೇಳುತ್ತಾರೆ.
ಕೆ.ಆರ್.ಡಿ.ಐ.ಎಲ್ಗೆ ಕಾಮಗಾರಿ ಕೊಡಿ ಎಂದು ಶಾಸಕಿ ಪತ್ರ ಬರೆದಿರುವ ಬಗ್ಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯ್ಕ ಲೋಕಾಯುಕ್ತಕ್ಕೆ ದೂರು ಕೊಡಲು ಮುಂದಾಗಿದ್ದಾರೆ. ಭ್ರಷ್ಟಾಚಾರ ಮಾಡಲೆಂದು ಈ ರೀತಿ ಪತ್ರ ಬರೆದಿದ್ದು ತನಿಖೆ ನಡೆಸುವಂತೆ ದೂರು ನೀಡುವುದಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ಕಾರವಾರದಲ್ಲಿ ಶಾಸಕಿ ಹಾಗೂ ಕೆಲ ಗುತ್ತಿಗೆದಾರರ ನಡುವೆ ಗುದ್ದಾಟ ಪ್ರಾರಂಭವಾಗಿದ್ದು ಇದು ಯಾವ ಹಂತಕ್ಕೆ ತಲುಪಲಿದೆ ಎನ್ನುವುದನ್ನ ಕಾದು ನೋಡಬೇಕಾಗಿದೆ.
ಇದನ್ನೂ ಓದಿ: ರೈತರ ಹಿತಕ್ಕೆ ನೀರಾವರಿಗಾಗಿ ನಾನು ಗಲ್ಲಿಗೇರಲು ಸಿದ್ಧ: ಸಿಎಂ ಬೊಮ್ಮಾಯಿ