ಕಾರವಾರ: ಕೊರೊನಾ ಹಾಟ್‌ಸ್ಪಾಟ್ ಆಗಿ ಗುರುತಿಸಿಕೊಂಡಿದ್ದ ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್-19 ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಆದ್ರೆ ತೊಲಗಿದಳಲ್ಲ ಮಹಾಮಾರಿ ಎಂಬ ನೆಮ್ಮದಿಯ ಉಸಿರು ಬಿಡುತ್ತಿದ್ದಂತೆಯೇ ನೆರೆಯ ಮಹಾರಾಷ್ಟ್ರದಲ್ಲಿ ಕೊರೊನಾ 2ನೇ ಅಲೆ ಪ್ರಾರಂಭವಾಗಿದೆ. ಇದು ಮತ್ತೆ ಕರಾವಳಿ ಜನರ ನೆಮ್ಮದಿಗೆ ಭಂಗ ತಂದಿದೆ.
ಜಿಲ್ಲೆಯಲ್ಲಿ ಇದುವರೆಗೆ 14,696 ಮಂದಿ ಸೋಂಕಿಗೆ ಒಳಗಾಗಿದ್ದು, ಅವರಲ್ಲಿ 187 ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾ ಅಲೆಯ ಆರಂಭದಲ್ಲೇ ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದ್ದು, ಕೋವಿಡ್ ಲ್ಯಾಬ್ ಸ್ಥಾಪಿಸಿ ಸೋಂಕಿತರಿಗೆ ಸೂಕ್ತ ವ್ಯವಸ್ಥೆ ಒದಗಿಸುವ ಮೂಲಕ ಕೊರೊನಾ ನಿರ್ವಹಣೆಯಲ್ಲಿ ರಾಜ್ಯಕ್ಕೆ ಮಾದರಿ ಕಾರ್ಯ ಮಾಡಿತ್ತು. ಪರಿಣಾಮ ಇದುವರೆಗೆ ಕೊರೊನಾ ಸೋಂಕಿತರ ಪೈಕಿ 14,487 ಮಂದಿ ಚೇತರಿಸಿಕೊಂಡಿದ್ದು, ಸದ್ಯ ಜಿಲ್ಲೆಯಲ್ಲಿ ಕೇವಲ 22 ಸಕ್ರಿಯ ಪ್ರಕರಣಗಳು ಬಾಕಿ ಉಳಿದುಕೊಂಡಿವೆ.
ಇದು ಜಿಲ್ಲೆಯ ಜನರ ಸಂತಸಕ್ಕೆ ಕಾರಣವಾಗಿದ್ದು, ನಿಟ್ಟುಸಿರು ಬಿಡುವಂತಾಗಿತ್ತು. ಆದ್ರೆ, ಇದೀಗ ಮತ್ತೆ ನೆರೆಯ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಕರಾವಳಿ ಹಾಗೂ ಗೋವಾ ನಡುವೆ ಪ್ರತಿನಿತ್ಯ ಯಾವುದೇ ತಪಾಸಣೆ ಇಲ್ಲದೇ ಜನರು ಓಡಾಟ ನಡೆಸುತ್ತಿರುವುದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ ಎನ್ನುತ್ತಾರೆ ಸ್ಥಳೀಯರಾದ ರವಿ ಕಸಬೇಕರ್.
ಪ್ರವಾಸಿಗರಿಂದ ಆತಂಕ ಹೆಚ್ಚಳ: ಜಿಲ್ಲಾ ಕೇಂದ್ರ ಕಾರವಾರ, ನೆರೆಯ ಗೋವಾ ಗಡಿಗೆ ಕೇವಲ 15 ಕಿಲೋ ಮೀಟರ್ ದೂರದಲ್ಲಿದ್ದು, ಪ್ರತಿನಿತ್ಯ ಸಾವಿರಾರು ಮಂದಿ ಸ್ಥಳೀಯರು ಕೆಲಸಕ್ಕೆಂದು ಗೋವಾಕ್ಕೆ ತೆರಳುತ್ತಾರೆ. ಅಲ್ಲದೇ, ಗೋವಾದಿಂದ ತರಕಾರಿ, ಮೀನು ಖರೀದಿಗಾಗಿ ಅಲ್ಲಿನ ಜನರು ಆಗಮಿಸುವುದರ ಜೊತೆಗೆ ಕರ್ನಾಟಕ-ಗೋವಾ ನಡುವೆ ಪ್ರತಿನಿತ್ಯ ಸಾವಿರಾರು ಮಂದಿ ಪ್ರವಾಸಿಗರು ಸಹ ಓಡಾಟ ನಡೆಸುತ್ತಾರೆ. ಆದ್ರೆ ಜಿಲ್ಲೆಯ ಗೋವಾ ಗಡಿಯಲ್ಲಿ ಆರೋಗ್ಯ ಇಲಾಖೆ ಯಾವುದೇ ತಪಾಸಣೆಗೆ ವ್ಯವಸ್ಥೆ ಮಾಡಿಲ್ಲದಿರುವುದು ಸ್ಥಳೀಯರಲ್ಲಿ ಮಹಾರಾಷ್ಟ್ರ ಸೋಂಕು ಜಿಲ್ಲೆಗೆ ಪ್ರವೇಶಿಸುವ ಆತಂಕವನ್ನ ಹೆಚ್ಚು ಮಾಡಿದೆ.
ಓದಿ: ಬಡವರ್ಗವನ್ನು ಮತ್ತಷ್ಟು ಕುಗ್ಗಿಸಿದ ಕೋವಿಡ್ - ಲಾಕ್ಡೌನ್: ಬಾಲಕಾರ್ಮಿಕರ ಪ್ರಮಾಣದಲ್ಲಿ ಹೆಚ್ಚಳ!
ಇನ್ನು ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಯನ್ನು ಕೇಳಿದ್ರೆ, ಈಗಾಗಲೇ ಜಿಲ್ಲೆಗೆ ಕೇರಳದಿಂದ ಆಗಮಿಸಿದ್ದ ವಿದ್ಯಾರ್ಥಿಗಳ ಗಂಟಲು ದ್ರವದ ಮಾದರಿ ಪರೀಕ್ಷಿಸಿದ್ದು, ಯಾವುದೇ ಪಾಸಿಟಿವ್ ವರದಿಯಾಗಿಲ್ಲ. ಅಲ್ಲದೇ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿಗೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದ್ದು, ಅಗತ್ಯವಿದ್ದಲ್ಲಿ ಗಡಿಯಲ್ಲಿ ತಪಾಸಣೆಗೆ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ.