ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ತೊಂದರೆಗೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಇಂತವರಿಗೆ ಸಹಾಯವಾಣಿ ಮೂಲಕ ಕೆಲ ಅಗತ್ಯ ನೆರವು ನೀಡಲು ಜಿಲ್ಲಾ ಕಾಂಗ್ರೆಸ್ ಸಿದ್ದವಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ತಿಳಿಸಿದ್ದಾರೆ.
ಕಾರವಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶ ಹಾಗೂ ರಾಜ್ಯದಲ್ಲಿ ಕೊರೊನಾ ಹೆಚ್ಚುವುದರ ಬಗ್ಗೆ ತಜ್ಞರು ಸಲಹೆ ನೀಡಿದ್ದರು. ಸರ್ಕಾರ ಯಾವುದೇ ಮುಂಜಾಗ್ರತೆ ತೆಗೆದುಕೊಳ್ಳದ ಕಾರಣ ಇಂದು ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇಂತಹ ಸಂದರ್ಭದಲ್ಲಿ ಪಕ್ಷ ಸಂಘಟನೆಯನ್ನು ಬದಿಗಿಟ್ಟು, ಸೋಂಕಿತರ ಹಾಗೂ ತೊಂದರೆಗೊಳಗಾದವರ ನೆರವಿಗೆ ತೆರಳುವಂತೆ ಹೈಕಮಾಂಡ್ ಸೂಚಿಸಿದೆ. ಅದರಂತೆ ಜಿಲ್ಲಾದ್ಯಂತ ಕಳೆದ ಕೆಲ ದಿನಗಳಿಂದ ಆಸ್ಪತ್ರೆಗಳ ಭೇಟಿ ಮಾಡಿ, ಸಮಸ್ಯೆ ಆಲಿಸಲಾಗಿದೆ.
ಸೋಂಕಿತರು ಹಾಗೂ ಅವರ ಸಂಪರ್ಕಕ್ಕೆ ಬಂದವರನ್ನು ಹೋಂ ಕ್ವಾರಂಟೈನ್ ಮಾಡಲಾಗುತ್ತಿದ್ದು, ಇದು ಇನ್ನಷ್ಟು ಜನರಿಗೆ ಹಬ್ಬಲು ಕಾರಣವಾಗಿದೆ. ಕೂಡಲೇ ಜಿಲ್ಲಾಡಳಿತದ ಸಭಾ ಭವನ, ಕಲ್ಯಾಣಮಂಟಪ ಸೇರಿ ಇನ್ನಿತರ ಭಾಗಗಳಲ್ಲಿ ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಇಟ್ಟು ಸೋಂಕು ಹರಡದಂತೆ ತಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಸೋಂಕಿತರು ಹೆಚ್ಚಾದ ಕಾರಣ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ನಿಂದ ಸಹಾಯವಾಣಿ ತೆರೆಯಲಾಗುತ್ತಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದ ಜನರಿಗೆ ಆ್ಯಂಬುಲೆನ್ಸ್, ಮೆಡಿಸಿನ್ ಸೇರಿದಂತೆ ಕೆಲ ಅಗತ್ಯ ನೆರವು ಬೇಕಾದಲ್ಲಿ ಸಹಾಯವಾಣಿಗೆ ಕರೆ ಮಾಡಿ. ಅಲ್ಲದೆ, ಆಕ್ಸಿಜನ್ ಕೊರತೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ನಾಯಕರು ಎಲ್ಲಾ ತಾಲೂಕಿನ ಆಸ್ಪತ್ರೆಗಳಿಗೆ ಜಂಬೋ ಸಿಲಿಂಡರ್ ನೀಡಲು ಮುಂದಾಗಿದ್ದಾರೆ ಎಂದು ಹೇಳಿದರು.
ಬಳಿಕ ಮಾತನಾಡಿದ ಮಾಜಿ ಶಾಸಕ ಸತೀಶ್ ಸೈಲ್, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಜನರಿಗೆ ಅಗತ್ಯ ನೆರವು ನೀಡಲು ತೀರ್ಮಾನಿಸಲಾಗಿದೆ. ಪ್ರಮುಖವಾಗಿ ಆಕ್ಸಿಜನ್, ಆ್ಯಂಬುಲೆನ್ಸ್ ಜೊತೆಗೆ ಅಗತ್ಯ ಇದ್ದವರಿಗೆ ವೈದ್ಯರಿಂದ ಸಹಾಯವಾಣಿ ಮೂಲಕ ಉಚಿತ ಸಲಹೆ ನೀಡಲಾಗುತ್ತದೆ. ಅಲ್ಲದೆ, ಆಸ್ಪತ್ರೆಯಲ್ಲಿ ದಾಖಲಾಗಿರುವ ಸೋಂಕಿತರ ಪಟ್ಟಿಯನ್ನು ಅಧಿಕಾರಿಗಳು ನೀಡಿದಲ್ಲಿ ಅವರಿಗೆ ವೈದ್ಯರ ಸಲಹೆಯಂತೆ ಅಗತ್ಯವಿರುವ ಜ್ಯೂಸ್, ಸೂಪ್, ಮೊಟ್ಟೆ ಇಲ್ಲವೇ ಹಣ್ಣನ್ನು ಆಸ್ಪತ್ರೆಗಳಿಗೆ ಸೂಚಿಸಿದ ಹೊಟೇಲ್ಗಳಿಂದ ನೀಡಲು ಸಿದ್ದರಿರುವುದಾಗಿ ತಿಳಿಸಿದ್ದಾರೆ.