ಶಿರಸಿ: ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ಶಾಸಕ ಶಿವರಾಮ ಹೆಬ್ಬಾರ್ ರಾಜೀನಾಮೆ ನೀಡಿದ್ದಾರೆ. ಇದರಿಂದ ಜಿಲ್ಲೆಯಲ್ಲಿದ್ದ ಇಬ್ಬರು ಕೈ ಶಾಸಕರ ಸಂಖ್ಯೆ ಒಂದಕ್ಕೆ ಇಳಿದಿದೆ. ಪರಿಣಾಮ ಜಿಲ್ಲಾ ಕಾಂಗ್ರೆಸ್ನಲ್ಲಿ ತಲ್ಲಣ ಉಂಟಾಗಿದೆ ಎಂಬ ಮಾತುಗಳು ಜಿಲ್ಲೆಯಾದ್ಯಂತ ಕೇಳಿ ಬರುತ್ತಿವೆ.
ರಾಜ್ಯದಲ್ಲಿ ಹಿಂದೆಂದೂ ಕಾಣದ ರೀತಿಯ ನಾಟಕೀಯ ಬೆಳವಣಿಗೆಯಲ್ಲಿ 14 ಜನ ಮೈತ್ರಿ ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ಅದರಲ್ಲಿ ಜಿಲ್ಲೆಯ ಪ್ರಭಾವಿ ಶಾಸಕ ಶಿವರಾಮ ಹೆಬ್ಬಾರ್ ಇದ್ದಾರೆ. ಅವರ ರಾಜೀನಾಮೆಯಿಂದ ಕಾಂಗ್ರೆಸ್ ಭದ್ರ ಕೋಟೆಯಾಗಿದ್ದ ಉತ್ತರ ಜಿಲ್ಲೆಯಲ್ಲಿ ಕೈ ಶಾಸಕರಾಗಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಒಬ್ಬರೇ ಉಳಿದುಕೊಂಡಂತಾಗಿದೆ. ಇದರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಬಿಜೆಪಿ ಸರ್ಕಾರ ರಚನೆಗೆ ಕಸರತ್ತು ಮಾಡುತ್ತಿದೆ. ಆಪರೇಶನ್ ಕಮಲ ಮಾಡಲು ಹೋಗಿ ವಿಫಲವಾಗಿದ್ದೂ ಇದೆ. ಆ ವೇಳೆ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರ ಹೆಸರು ಪ್ರಸ್ತಾಪವಾಗಿತ್ತು. ಆಗ ಅಲ್ಲಗಳೆದಿದ್ದ ಅವರು ಪಕ್ಷವನ್ನು ಯಾವುದೇ ಕಾರಣಕ್ಕೂ ತೊರೆಯುವುದಿಲ್ಲ ಎಂದಿದ್ದರು. ಆದರೆ ಶನಿವಾರ ಉಳಿದ ಶಾಸಕರೊಂದಿಗೆ ತೆರಳಿ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಇದರಿಂದ ಜಿಲ್ಲಾ ಕಾಂಗ್ರೆಸ್ ವಲಯದಲ್ಲಿ ತಲ್ಲಣ ಉಂಟಾಗಿದ್ದು, ಇರುವ ಎರಡು ಶಾಸಕರಲ್ಲಿ ಒಬ್ಬರನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ.