ಭಟ್ಕಳ(ಉತ್ತರ ಕನ್ನಡ): ಭಾರತ ಚೀನಾ ಗಡಿಯ ಗಲ್ವಾನ್ ಕಣಿವೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ 20 ಭಾರತೀಯ ಯೋಧರಿಗೆ ಭಟ್ಕಳದ ಪ್ರವಾಸಿ ಮಂದಿರದ ಎದುರಿನ ಮಾಜಿ ಸೈನಿಕರ ಸಂಘ ಮತ್ತು ತಾಲೂಕಿನ ವಿವಿಧ ಸಂಘಟನೆಗಳಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದ ನಂತರ ಮಾತನಾಡಿದ ತಾಲೂಕು ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಎಮ್.ಡಿ. ಫಕ್ಕಿ, ಚೀನಾ ಮೊದಲು ಕೊರೊನಾ ವೈರಸ್ ಮೂಲಕ ಜಗತ್ತಿನ ನೆಮ್ಮದಿಯನ್ನೇ ಭಂಗ ಮಾಡಿತು. ನಂತರ ಕುತಂತ್ರದಿಂದ ಭಾರತದ ಭೂಭಾಗವನ್ನು ಕಬಳಿಸಲು ಬರುತ್ತಿದೆ. ಇಂತ ಪಿತೂರಿಗೆ ನಮ್ಮ ಸೈನಿಕರು ಎಂದಿಗೂ ಅವಕಾಶ ನೀಡುವುದಿಲ್ಲ. ಸೈನಿಕರ ಬೆಂಬಲಕ್ಕೆ ಭಾರತೀಯರಾದ ನಾವು ಸದಾ ಸಿದ್ಧ ಎಂದರು.
ಶಾಸಕ ಸುನೀಲ್ ನಾಯ್ಕ ಮಾತನಾಡಿ 'ಮಳೆ ಗಾಳಿ ಚಳಿ ಎನ್ನದೆ ದೇಶವನ್ನು ಕಾಯುತ್ತಿರುವ ಸೈನಿಕರ ಬೆಂಬಲಕ್ಕೆ ನಿಲ್ಲಲು ನಾವು ಯಾವಾಗಲೂ ಸಿದ್ದರಿದ್ದು ನಿಮ್ಮ ಜೊತೆ ನಾವಿದ್ದೇವೆ. ಚೀನಾ ಕುತಂತ್ರಕ್ಕೆ ನಮ್ಮ 20 ಯೋಧರು ಬಲಿಯಾಗಿರುವುದು ಅತ್ಯಂತ ದುರಾದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.
ಭಟ್ಕಳ ಬಿಜೆಪಿ ಅಧ್ಯಕ್ಷ ಸುಬ್ರಾಯ ದೇವಾಡಿಗ, ಭಟ್ಕಳ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ, ಭಟ್ಕಳ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್, ಗೋವಿಂದ ನಾಯ್ಕ, ಶ್ರೀಧರ ನಾಯ್ಕ ಆಸರಕೇರಿ, ಕೃಷ್ಣ ನಾಯ್ಕ ಆಸರಕೇರಿ, ವಿಠ್ಠಲ್ ನಾಯ್ಕ, ಮೊದಲಾದವರು ಗಲ್ವಾನ್ ಘಟನೆಯನ್ನು ಖಂಡಿಸಿ ಮಾತನಾಡಿದರು. ಅಲ್ಲದೆ, ಚೀನಾ ನಿರ್ಮಿತ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ಆರ್ಥಿಕವಾಗಿಯೂ ತಕ್ಕ ಪಾಠ ಕಲಿಸಬೇಕಾದ ಅಗತ್ಯ ಇದೆ ಎಂದು ಪ್ರತಿಪಾದಿಸಿದರು.