ಕಾರವಾರ: ಉತ್ತರ ಕನ್ನಡದಲ್ಲಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾನಿಗೊಳಗಾದ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ 200 ಕೋಟಿ ರೂ ಘೋಷಿಸಿದ್ದಾರೆ. ಜತೆಗೆ ಹಾನಿಗೊಳಗಾದ ಮನೆಗಳಿಗೆ ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ.
ಯಲ್ಲಾಪುರ ಹಾಗು ಅಂಕೋಲಾ ಭಾಗದ ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ ಬಳಿಕ ಅಂಕೋಲಾದ ನಾಡವರ ಸಮುದಾಯ ಭವನದಲ್ಲಿ ಅಧಿಕಾರಿಗಳೊಂದಿಗೆ ಪ್ರವಾಹ ಹಾನಿ ಕುರಿತು ಮಾಹಿತಿ ಪಡೆದುಕೊಂಡರು. ಜಿಲ್ಲೆಯಲ್ಲಿ ಹಾನಿಗೊಳಗಾದ ಮನೆ, ರಸ್ತೆ, ಗ್ರಾಮಗಳು, ವಿದ್ಯುತ್ ಹಾಗೂ ಆಸ್ತಿ ಪಾಸ್ತಿಗಳ ಬಗ್ಗೆ ಮಾಹಿತಿ ಪಡೆದ ಅವರು ಬಳಿಕ ಪರಿಹಾರ ಘೋಷಣೆ ಮಾಡಿದ್ದಾರೆ.
ಪ್ರಮುಖವಾಗಿ ಜಿಲ್ಲೆಯಲ್ಲಿ ಹಾನಿಗೊಳಗಾದ ಪಿಡಬ್ಲ್ಯೂಡಿ ರಸ್ತೆಗೆ 100 ಕೋಟಿ, ಆರ್‌ಡಿಪಿಆರ್ ರಸ್ತೆಗೆ 100 ಕೋಟಿ ಹಣ ತುರ್ತು ಬಿಡುಗಡೆಗೊಳಿಸಲಾಗುವುದು. ಮನೆ ಕಳೆದುಕೊಂಡ ಅತಿಕ್ರಮಣದಾರರೂ ಸೇರಿ ಮನೆ ಹಾನಿಗೆ ಕಳೆದ ಬಾರಿಯಂತೆ 10 ಸಾವಿರ ರೂ. ತುರ್ತು ಪರಿಹಾರವನ್ನು ಅಗತ್ಯ ವಸ್ತುಗಳ ಖರೀದಿಗೆ ನೀಡಲು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ಗೆ ಸೂಚನೆ ನೀಡಿದರು.
ನೆರೆಯಿಂದ ತೀವ್ರ ಹಾನಿಗೊಳಗಾಗಿರುವ ಕಳಚೆ ಗ್ರಾಮವನ್ನು ಪೂರ್ಣ ಸ್ಥಳಾಂತರಕ್ಕೆ ಸ್ಥಳೀಯರು ಕೂಡ ಒಪ್ಪಿದ್ದು, ಭೂಕುಸಿತದಿಂದ ಮನೆ ನಿರ್ಮಾಣ ಸಾಧ್ಯವಿಲ್ಲದ ಕಾರಣ ಕೂಡಲೇ ಆ ಗ್ರಾಮ ಸ್ಥಳಾಂತರಿಸಬೇಕಾಗಿದೆ. ಗ್ರಾಮದ ಸ್ಥಳಾಂತರಕ್ಕೆ ಅಗತ್ಯವಿರುವ ಸುಮಾರು 15 ಎಕರೆ ಪ್ರದೇಶವನ್ನು ಕೂಡಲೇ ಗುರುತಿಸುವಂತೆ ಜಿಲ್ಲಾಧಿಕಾರಿಗೆ ಸಿಎಂ ಸೂಚಿಸಿದ್ದಾರೆ.
ಹತ್ತಾರು ಕಡೆ ಭೂಕುಸಿತವಾಗಿರುವ ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಘಟ್ಟಕ್ಕೆ 10 ಕೋಟಿ ರೂ. ಬಿಡುಗಡೆಯ ಭರವಸೆ ನೀಡಿದ ಸಿಎಂ ಕರಾವಳಿಯ ಪ್ರತಿ ವಿಧಾನಸಭಾ ಕ್ಷೇತ್ರಗಳ ಮೀನುಗಾರರಿಗೆ 3 ಸಾವಿರ ವ್ಯಾಕ್ಸಿನ್ ನೀಡಲು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: 'ಪ್ರವಾಹ, ಭೂಕುಸಿತದಿಂದ ಸರ್ವಸ್ವವೂ ನಾಶ..' ಮುಖ್ಯಮಂತ್ರಿ ಮುಂದೆ ವಿದ್ಯಾರ್ಥಿಗಳ ಕಣ್ಣೀರು