ಕಾರವಾರ: ಅಪಘಾತವಾಗಿ ಗಾಯಗೊಂಡ ಚಿರತೆ ರಕ್ಷಣೆಗೆ ತೆರಳಿದ್ದ ವ್ಯಕ್ತಿ ಮೇಲೆಯೇ ಚಿರತೆ ದಾಳಿ ನಡಸಿರುವ ಘಟನೆ ಕುಮಟಾ ತಾಲೂಕಿನ ಬರ್ಗಿ ಬಳಿ ನಡೆದಿದೆ.

ತಾಲೂಕಿನ ಹಿರೇಗುತ್ತಿ ನಿವಾಸಿ ಚಂದ್ರಹಾಸ ನಾಯಕ ಗಾಯಗೊಂಡವರು. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶುಕ್ರವಾರ ರಾತ್ರಿ ತಮ್ಮ ಸ್ನೇಹಿತರೊಂದಿಗೆ ಅಂಕೋಲಾಗೆ ತೆರಳುತ್ತಿದ್ದಾಗ ಹೆದ್ದಾರಿಯ ಬರ್ಗಿ ಘಟ್ಟದಲ್ಲಿ ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದು ಚಿರತೆಯೊಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿತ್ತು.
ಪ್ರಯಾಣಿಕರು ಚಿರತೆಯ ಫೋಟೋ, ಸೆಲ್ಫಿ ತೆಗೆಯಲು ಮೂಗಿಬಿದ್ದಿದ್ದರು. ಆದರೆ, ಚಂದ್ರಹಾಸ ಚಿರತೆಯನ್ನು ಹೆದ್ದಾರಿ ಪಕ್ಕಕ್ಕೆ ಇಡಲು ಮುಂದಾದಾಗ ಏಕಾಏಕಿ ಚಿರತೆ ದಾಳಿ ನಡೆಸಿ, ಗಾಯಗೊಳಿಸಿ ಪರಾರಿಯಾಗಿದೆ. ತಕ್ಷಣ ಗಾಯಗೊಂಡ ಚಂದ್ರಹಾಸ ನಾಯಕನನ್ನು ಕುಮಟಾ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.