ಕಾರವಾರ: ಮಹಾರಾಷ್ಟ್ರದಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಕಾರವಾರದ ಮಾಜಾಳಿ ಚೆಕ್ಪೋಸ್ಟ್ನಲ್ಲಿ ತಪಾಸಣೆ ಕಡ್ಡಾಯಗೊಳಿಸಲಾಗಿದ್ದು, ಮಹಾರಾಷ್ಟ್ರದಿಂದ ಕೋವಿಡ್ ನೆಗೆಟಿವ್ ವರದಿ ತರದೇ ಬರುವವರನ್ನು ವಾಪಸ್ ಕಳುಹಿಸಲಾಗುತ್ತಿದೆ.
ಕಾರವಾರದಲ್ಲಿ ಮಹಾರಾಷ್ಟ್ರದವರ ಸಂಪರ್ಕಕ್ಕೆ ಬಂದವರಲ್ಲೇ ಹೆಚ್ಚು ಕೊವಿಡ್ ಸೋಂಕು ಪತ್ತೆಯಾಗುತ್ತಿದೆ. ಈ ಕಾರಣದಿಂದಾಗಿ ಮಹಾರಾಷ್ಟ್ರದಿಂದ ಗೋವಾ ಮೂಲಕ ಬರುವವರನ್ನು ಕಾರವಾರದ ಮಾಜಾಳಿ ಚೆಕ್ ಪೋಸ್ಟ್ನಲ್ಲಿ ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಪೊಲೀಸ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಚೆಕ್ ಪೋಸ್ಟ್ನಲ್ಲಿ ನಿಯೋಜಿಸಲಾಗಿದೆ. ಮಹಾರಾಷ್ಟ್ರದಿಂದ ಬರುವವರಿಗೆ 72 ಗಂಟೆಗಳ ಒಳಗಾಗಿ ಪಡೆದ ನೆಗೆಟಿವ್ ಆರ್‌ಟಿಪಿಸಿಆರ್ ಪ್ರಮಾಣಪತ್ರ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಆರ್‌ಟಿಪಿಸಿಆರ್ ವರದಿ ಇಲ್ಲದವರನ್ನು ವಾಪಸ್ ಕಳುಹಿಸಲಾಗುತ್ತಿದೆ. ಮಹಾರಾಷ್ಟ್ರ ಹೊರತುಪಡಿಸಿ ಇತರ ರಾಜ್ಯದವರನ್ನು ತಪಾಸಣೆಗೆ ಒಳಪಡಿಸಿ ಪ್ರವೇಶ ನೀಡಲಾಗುತ್ತಿದೆ. ಕೋವಿಡ್ ಲಕ್ಷಣವಿದ್ದರೆ ಅವರನ್ನು ಪರೀಕ್ಷೆಗೆ ಒಳಪಡಿಸಿ ಸಮೀಪದ ಆರೋಗ್ಯ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ. ಮಾರ್ಗಸೂಚಿಯಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಓದಿ : ರಾಜ್ಯದಲ್ಲಿಂದು 14,738 ಕೋವಿಡ್ ಸೋಂಕಿತರು ಪತ್ತೆ.. 66 ಮಂದಿ ಸಾವು!
ಗುರುವಾರ ಉತ್ತರ ಕನ್ನಡ ಜಿಲ್ಲೆಯಲ್ಲಿ 82 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಕಂಡು ಬಂದಿದ್ದು, ಈ ಪೈಕಿ ಕಾರವಾರದಲ್ಲೇ ಅತಿ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಅಂದರೆ 25 ಸೋಂಕಿತರು ಕಾರವಾರದಲ್ಲೇ ಇದ್ದು, ಇವರೆಲ್ಲ ಮಹಾರಾಷ್ಟ್ರದವರ ಸಂಪರ್ಕಕ್ಕೆ ಬಂದವರು ಎನ್ನಲಾಗಿದೆ. ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮವಹಿಸದೇ ಇದ್ದಲ್ಲಿ ಮುಂದೆ ಕಾರವಾರ ಕೋವಿಡ್ ಹಾಟ್ ಸ್ಪಾಟ್ ಆಗುವ ಸಾಧ್ಯತೆಯೂ ಇರುವ ಕಾರಣ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ.