ಕಾರವಾರ : ಗೋವಾದಲ್ಲಿ ಮೇ. 3ರವರೆಗೆ ಲಾಕ್ಡೌನ್ ಘೋಷಣೆ ಮಾಡಿರುವ ಹಿನ್ನೆಲೆ ಜನ ಕರ್ನಾಟಕಕ್ಕೆ ಆಗಮಿಸುತ್ತಿದ್ದು, ಗೋವಾ-ಕರ್ನಾಟಕ ಗಡಿ ಭಾಗವಾದ ಉತ್ತರ ಕನ್ನಡ ಜಿಲ್ಲೆಯ ಮಾಜಾಳಿ ಚೆಕ್ ಪೋಸ್ಟ್ನಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ.
ಗೋವಾದಲ್ಲಿ ಏಪ್ರಿಲ್ 30(ನಿನ್ನೆ)ಯಿಂದ ಲಾಕ್ಡೌನ್ ಜಾರಿ ಮಾಡಲಾಗಿದೆ. ಹೀಗಾಗಿ, ಗೋವಾದ ಕಂಪನಿಗಳು ಮತ್ತು ಇತರ ಕಡೆಗಳಲ್ಲಿ ಉದ್ಯೋಗದಲ್ಲಿರುವ ಕರ್ನಾಟಕದ ಜನ ರಾಜ್ಯದತ್ತ ಮುಖ ಮಾಡಿದ್ದಾರೆ. ಗೋವಾದಿಂದ ಕರ್ನಾಟಕಕ್ಕೆ ಬರಬೇಕಾದರೆ ಮಾಜಾಳಿ ಚೆಕ್ಪೋಸ್ಟ್ ದಾಟಿ ಬರಬೇಕು. ಎರಡೂ ರಾಜ್ಯಗಳಲ್ಲಿ ಕೋವಿಡ್ ಉಲ್ಬಣಗೊಂಡಿರುವ ಹಿನ್ನೆಲೆ ಇಲ್ಲಿ ಪ್ರಯಾಣಿಕರನ್ನು ತೀವ್ರ ತಪಾಸಣೆ ಮಾಡಲಾಗ್ತಿದೆ.
ವೈದ್ಯಕೀಯ ಸಾಮಗ್ರಿಗಳು ಮತ್ತು ಸರಕು ಸಾಗಣೆ ವಾಹನಗಳ ಚಾಲಕರು ಕೂಡ ಚೆಕ್ ಪೋಸ್ಟ್ನಲ್ಲಿ ಕೋವಿಡ್ ನೆಗೆಟಿವ್ ವರದಿ ನೀಡುವುದು ಕಡ್ಡಾಯವಾಗಿದೆ. ಎರಡೂ ರಾಜ್ಯಗಳ ಪ್ರವೇಶಕ್ಕೂ ಕೋವಿಡ್ ರಿಪೋರ್ಟ್ ನೀಡಬೇಕಾಗಿದೆ. ಕಾರವಾರ ಉಪ ವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ, ತಹಶೀಲ್ದಾರ್ ಆರ್.ವಿ. ಕಟ್ಟಿ ಅವರು ಮಾಜಾಳಿ ಚೆಕ್ ಪೋಸ್ಟ್ಗೆ ತೆರಳಿ ತಪಾಸಣೆ ನಡೆಸಿದ್ದಾರೆ.
ಅನಗತ್ಯವಾಗಿ ಓಡಾಡುವ ಯಾರಿಗೂ ಗಡಿಯಲ್ಲಿ ರಾಜ್ಯ ಪ್ರವೇಶಕ್ಕೆ ಅನುಮತಿ ನೀಡುತ್ತಿಲ್ಲ. ಪ್ರಯಾಣಿಕರು ಕೋವಿಡ್ ನೆಗೆಟಿವ್ ವರದಿ ತೋರಿಸುವುದು ಕಡ್ಡಾಯ. ಗೋವಾದಲ್ಲಿ ಲಾಕ್ಡೌನ್ ಆಗಿರುವ ಕಾರಣ ಮೇಲಾಧಿಕಾರಿಗಳಿಂದ ಏನಾದರು ಹೊಸ ಆದೇಶ ಬಂದರೆ, ಅದನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಗೋವಾದಿಂದ ಬರುವ ಯಾರಲ್ಲಾದರು ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ, ತಕ್ಷಣ ಅವರನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಎಸಿ ವಿದ್ಯಾಶ್ರೀ ಚಂದರಗಿ ತಿಳಿಸಿದ್ದಾರೆ.