ಕಾರವಾರ/ಉತ್ತರಕನ್ನಡ: ಜುಲೈ ಅಂತ್ಯದ ವೇಳೆಗೆ ಸುರಿದ ಭಾರಿ ಮಳೆಯಿಂದಾಗಿ ಕಾರವಾರದ ಕೊಡಸಳ್ಳಿ ಜಲಾಶಯದ ಬಳಿ ಗುಡ್ಡ ಕುಸಿತವಾಗಿ ಸಾಕಷ್ಟು ಆತಂಕಕ್ಕೆ ಕಾರಣವಾಗಿದ್ದ ಪ್ರದೇಶಗಳಿಗೆ ಮಂಗಳವಾರ ಕೇಂದ್ರ ಭಾರತೀಯ ಭೂ ವಿಜ್ಞಾನ ಸರ್ವೇಕ್ಷಣಾ ಸಂಸ್ಥೆಯ ತಂಡ ತೆರಳಿ ಪರಿಶೀಲನೆ ನಡೆಸಿದೆ.
ಜು.23 ರ ರಾತ್ರಿ ಸುಮಾರು 2 ಗಂಟೆಗೆ ಜಲಾಶಯದಿಂದ 200 ಮೀಟರ್ ದೂರದಲ್ಲಿ ಗುಡ್ಡಕುಸಿತವಾಗಿದ್ದು, ಸುಮಾರು 200 ಮೀಟರ್ ಎತ್ತರದಿಂದ ಕಲ್ಲು ಬಂಡೆ, ಮರಗಿಡಗಳ ಸಹಿತ ಭಾರಿ ಪ್ರಮಾಣದಲ್ಲಿ ಗುಡ್ಡ ಜಾರಿ ಬಂದಿದೆ. ಪರಿಣಾಮ ಒಂದು ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದ್ದು, ಇನ್ನೊಂದು ರಸ್ತೆಯಲ್ಲೂ ಕೂಡ ದೊಡ್ಡ ಪ್ರಮಾಣದಲ್ಲಿ ಮಣ್ಣು ಹಾಗೂ ಮರಗಿಡಗಳು ಬಿದ್ದಿದ್ದರಿಂದ ಅಂದು ವಿದ್ಯುದಾಗಾರದಲ್ಲಿ ಕೆಲಸ ಮಾಡುತ್ತಿದ್ದವರು ಸಂಚಾರ ಸಾಧ್ಯವಾಗದೇ ಸಮಸ್ಯೆಗೆ ಸಿಲುಕಿಕೊಳ್ಳುವಂತಾಗಿತ್ತು.
ಅಲ್ಲದೇ ಕೊಡಸಳ್ಳಿ ಸಮೀಪದ ಕಳಚೆಯಲ್ಲಿಯೂ ಕೂಡ ಭಾರಿ ಪ್ರಮಾಣದಲ್ಲಿ ಭೂ ಕುಸಿತವಾಗಿ ಊರಿನ ಹತ್ತಾರು ಮನೆಗಳು ಹಾನಿಗೊಳಗಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಇದಲ್ಲದೇ ಜಲಾಶಯದ ಸಮೀಪದ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿಯೂ ಭೂ ಕುಸಿತವಾಗಿರುವುದು ಕಂಡು ಬರುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿತ್ತು.
ಕೇಂದ್ರ ತಂಡ ಭೇಟಿ, ಪರಿಶೀಲನೆ
ಈ ಹಿನ್ನೆಲೆ ಕೇಂದ್ರ ತಂಡದ ಭೂ ವಿಜ್ಞಾನಿ ಕಮಲಕುಮಾರ್ ನೇತೃತ್ವದ ತಂಡ ಸ್ಥಳೀಯ ಅಧಿಕಾರಿಗಳ ಸಹಕಾರದಲ್ಲಿ ಕೊಡಸಳ್ಳಿ ಜಲಾಶಯದ ಸಮೀಪದ ಗುಡ್ಡಕುಸಿತ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಭೂ ಕುಸಿತವಾದ ಪ್ರದೇಶಗಳಲ್ಲಿ ಕಲ್ಲು ಮಣ್ಣಿನ ಪರೀಶೀಲನೆ ನಡೆಸಿದ ತಂಡ, ಸ್ಥಳೀಯ ಅಧಿಕಾರಿಗಳಿಂದ ಘಟನೆಯ ಬಗ್ಗೆ ಮಾಹಿತಿ ಪಡೆದು ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಸ್ಥಳದಲ್ಲಿಯೇ ಕಲ್ಲು ಮಣ್ಣಿನ ಪರೀಕ್ಷೆ ನಡೆಸಿದ ತಂಡ ಭೂ ಕುಸಿತವಾದ ಪ್ರದೇಶಗಳ ನಕ್ಷೆ ತೆಗೆದು ಮತ್ತೆ ಕುಸಿಯುವ ಸಾಧ್ಯತೆ ಬಗೆಗೆ ಅಧ್ಯಯನ ನಡೆಸಿದೆ.
ಭೂ ಕುಸಿತದ ಪ್ರದೇಶಗಳ ಅಧ್ಯಯನ
ಉತ್ತರಕನ್ನಡ ಜಿಲ್ಲೆಯಲ್ಲಿ ಭೂ ಕುಸಿತವಾದ ಪ್ರದೇಶಗಳ ಅಧ್ಯಯನ ನಡೆಸಲಾಗಿದೆ. ಅದರಲ್ಲಿ ಕಳಚೆ ಭಾಗದಲ್ಲಿ ತೀವ್ರತರವಾಗಿದ್ದು, ಇನ್ನಷ್ಟು ಪ್ರಮಾಣದಲ್ಲಿ ಗುಡ್ಡಕುಸಿತವಾಗುವ ಸಾಧ್ಯತೆ ಇದೆ. ಆದರೆ, ಕೊಡಸಳ್ಳಿ ಪ್ರದೇಶದಲ್ಲಿ ಆಗಿರುವ ಗುಡ್ಡ ಕುಸಿತದ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ. ಈಗಾಗಲೇ ಈ ಪ್ರದೇಶದಲ್ಲಿ ಸಾಕಷ್ಟು ಮಾಹಿತಿ ಕಲೆಹಾಕಿದ್ದು, ಮಣ್ಣು, ಕಲ್ಲು ಮಳೆ ನೀರಿನ ಪರೀಕ್ಷೆ ಕೂಡ ನಡೆಸಲಾಗುತ್ತದೆ. ಅದರ ವರದಿ ಬಂದ ಬಳಿಕ ಈ ಬಗ್ಗೆ ಸ್ಪಷ್ಟ ಕಾರಣ ತಿಳಿಯಲಿದೆ ಎಂದು ಕೇಂದ್ರ ಭಾರತೀಯ ಭೂ ವಿಜ್ಞಾನ ಸರ್ವೇಕ್ಷಣಾ ಸಂಸ್ಥೆಯ ವಿಜ್ಞಾನಿ ಕಮಲಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ:ದಸರಾ ಮಹೋತ್ಸವ: ಗಜಪಡೆಗೆ 30 ಲಕ್ಷ ರೂ.ವಿಮೆ ಘೋಷಣೆ
ಜಲಾಶಯಕ್ಕೆ ಯಾವುದೇ ಸಮಸ್ಯೆ ಇಲ್ಲ:
ಇನ್ನು ಜಲಾಶಯದಿಂದ ನೀರು ಬಿಟ್ಟ ಕಾರಣ ಪ್ರವಾಹ ಸಂಭವಿಸಿದೆ ಎಂದು ದೂರಲಾಗುತ್ತಿದೆ. ಆದರೆ ಜು.23 ರಂದು ಒಂದೇ ದಿನ ಸುರಿದ ವಿಪರೀತ ಮಳೆಯಿಂದಾಗಿ 4 ಲಕ್ಷ ಕ್ಯೂಸೆಕ್ ನೀರು ಕೊಡಸಳ್ಳಿ ಜಲಾಶಯಕ್ಕೆ ಹರಿದುಬಂದಿದೆ. ಆದರೆ, ಜಲಾಶಯದಿಂದ ಕೇವಲ 1.5 ಲಕ್ಷ ನೀರು ಹೊರ ಬಿಟ್ಟು ಉಳಿದದ್ದನ್ನು ಸಂಗ್ರಹಿಸಲಾಗಿದೆ. ಇದರಿಂದ ಆಗಬಹುದಾದ ದೊಡ್ಡ ಅಪಾಯ ತಪ್ಪಿದೆ.
ಇನ್ನು ಜಲಾಶಯದ ಬಳಿ ಗುಡ್ಡ ಕುಸಿತವಾಗಿರುವುದರಿಂದ ಜಲಾಶಯಕ್ಕೆ ಯಾವುದೇ ಅಪಾಯವಿಲ್ಲ. ಜೇಡಿ ಮಣ್ಣಿನಿಂದ ಕೂಡಿದ ಗುಡ್ಡ ಕುಸಿತವಾಗಿದ್ದು, ಈಗಾಗಲೇ ಹಲವು ಅಧ್ಯಯನ ತಂಡಗಳಿಂದ ಪರಿಶೀಲನೆ ನಡೆಸಲಾಗುತ್ತಿದೆ. ಸದ್ಯ ಜಲಾಶಯಕ್ಕೆ ತೆರಳುವ ರಸ್ತೆ ಹಾನಿಯಾಗಿದ್ದು ಇನ್ನು ಒಂದು ವಾರದಲ್ಲಿ ಸರಿಪಡಿಸಲಾಗುವುದು ಎಂದು ಕೊಡಸಳ್ಳಿ ಜಲಾಶಯದ ಎಕ್ಸಿಕ್ಯೂಟಿವ್ ಎಂಜಿನಿಯರ್ ಶೈಲೇಂದ್ರ ಪ್ರಸಾದ್ ತಿಳಿಸಿದ್ದಾರೆ.