ಭಟ್ಕಳ: ಕಷ್ಟಪಟ್ಟು ಬೆಳೆ ಬೆಳೆದ ರೈತರಿಗೆ ದಲ್ಲಾಳಿಗಳ ಹಾವಳಿ ತಪ್ಪಿಸುವುದು, ಬೆಳೆಗೆ ಉತ್ತಮ ಧಾರಣೆ ಸಿಗುವಂತಾಗಬೇಕೆಂಬ ಉದ್ದೇಶದಿಂದ ಕ್ಯಾಂಪ್ಕೋದ ಅಡಿಕೆ ಖರೀದಿ ಕೇಂದ್ರ ಕಾರ್ಯ ಮಾಡಬೇಕಿದೆ ಎಂದು ಹೊನ್ನಾವರ ಎ.ಪಿ.ಎಮ್.ಸಿ. ಅಧ್ಯಕ್ಷ ಗೋಪಾಲ ಎಮ್.ನಾಯ್ಕ ಹೇಳಿದರು.
ಅವರು ಸೋಮವಾರ ಕ್ಯಾಂಪ್ಕೋ ನಿಯಮಿತ ಮಂಗಳೂರು ಅವರಿಂದ ಭಟ್ಕಳದ ಶಿರಾಲಿಯಲ್ಲಿನ ಎ.ಪಿ.ಎಮ್.ಸಿ. ಉಪ ಮಾರುಕಟ್ಟೆಯಲ್ಲಿ ನೂತನ ಅಡಿಕೆ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
‘ಶಿರಾಲಿ ಎ.ಪಿ.ಎಮ್.ಸಿ. ವ್ಯಾಪ್ತಿಯಲ್ಲಿನ ಗೋಡೌನ್ ಖಾಲಿಯಿದ್ದು, ಇದರ ಸದ್ಬಳಕೆಗೆ ಯೋಚಿಸುತ್ತಿರುವ ವೇಳೆ ಕ್ಯಾಂಪ್ಕೋ ನಿಯಮಿತ ಮಂಗಳೂರಿನ ನಿರ್ದೇಶಕರು ಬಂದು ಶಿರಾಲಿಯಲ್ಲಿ ಕ್ಯಾಂಪ್ಕೋ ನಿಯಮಿತದಿಂದ ಅಡಿಕೆ ಖರೀದಿ ಕೇಂದ್ರ ಸ್ಥಾಪಿಸುವ ಬಗ್ಗೆ ಪ್ರಸ್ತಾವನೆ ನೀಡಿದರು. ಈಗ ಶಿರಾಲಿಯಲ್ಲಿ ಕ್ಯಾಂಪ್ಕೋ ಘಟಕವಾಗಿರುವುದು ದಲ್ಲಾಳಿಗಳ ಹಾವಳಿಯಿಂದ ರೈತರು ತಪ್ಪಿದಂತಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ಕ್ಯಾಂಪ್ಕೋ ನಿಯಮಿತದ ಉಪಾಧ್ಯಕ್ಷ ಶಂಕರ ನಾರಾಯಣ ಭಟ್ ಖಂಡಿಗೆ ‘ಸಂಸ್ಥೆಯ ಆರಂಭದ ದಿನದಲ್ಲಿಯೇ ಭಟ್ಕಳದಲ್ಲಿ ಅಡಿಕೆ ರಾಶಿಯ ಚೀಲಗಳು ಗೋಡೌನ್ ತುಂಬಿರುವುದು ಸಂತಸವಾಗಿದ್ದು, 4 ವರ್ಷ ಹಿಂದೆಯೇ ಸಂಸ್ಥೆಯು ಭಟ್ಕಳದಲ್ಲಿ ಆರಂಭವಾಗಬೇಕಿತ್ತು. ಸಮಗ್ರ ಕೃಷಿಯತ್ತ ರೈತರು ಹೋಗಬೇಕಿದೆ. ಒಂದೇ ಬೆಳೆಗೆ ರೈತರು ಸೀಮಿತವಾಗದೇ ಬಹುಬೆಳೆಯತ್ತ ಶ್ರಮಿಸಬೇಕು. ಗುಣಮಟ್ಟದ ರೂಪದಲ್ಲಿ ಬೆಳೆದ ಬೆಳೆಯನ್ನು ಸಂಸ್ಥೆಗೆ ತಲುಪಿಸಿದರೆ ಉತ್ತಮ ಧಾರಣೆ ನೀಡುವ ಕೆಲಸ ನಾವು ಮಾಡಲಿದ್ದೇವೆ ಎಂದರು.
ಇದೇ ವೇಳೆ ಅಡಿಕೆ ಕೇಂದ್ರಕ್ಕೆ ಪ್ರಥಮವಾಗಿ ಅಡಿಕೆ ನೀಡಿದ ರೈತರಿಗೆ ಚೆಕ್ ವಿತರಣೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯ ವಿಷ್ಣು ದೇವಾಡಿಗ, ಕ್ಯಾಂಪ್ಕೋದ ಉಪ ಜನರಲ್ ಮ್ಯಾನೇಜರ್ ಪ್ರಮೋದ್ ಕುಮಾರ್, ಕ್ಯಾಂಪ್ಕೋ ನಿಯಮಿತ ಹಿರಿಯ ನಿರ್ದೇಶಕ ಶಂಭುಲಿಂಗ ಜಿ.ಹೆಗಡೆ ನಡಗೋಡ, ಶಿರಸಿ ಕ್ಯಾಂಪ್ಕೋ ರೀಜನಲ್ ಮ್ಯಾನೇಜರ ಭರತ್ ಭಟ್ ಉಪಸ್ಥಿತರಿದ್ದರು.