ಕಾರವಾರ (ಉ.ಕ): ಇಲ್ಲಿನ ಪುರಾಣ ಪ್ರಸಿದ್ಧ ಕವಳೇಶ್ವರ ಗುಹೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿದ್ದ ಸೇತುವೆ ಮಳೆಯಿಂದಾಗಿ ಕೊಚ್ಚಿಹೋಗಿದ್ದು ಭಕ್ತಾದಿಗಳು ದೇವರ ದರ್ಶನಕ್ಕೆ ಹರಸಾಹಸಪಟ್ಟು ಹಳ್ಳ ದಾಟುತ್ತಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ತಾಲ್ಲೂಕಿನ ಅಂಬಿಕಾನಗರ ಬಳಿಯ ಕವಳೇಶ್ವರ ಗುಹೆ ಸಂಪರ್ಕಿಸುವ ಸೇತುವೆ ಕೊಚ್ಚಿಹೋಗಿ ಭಕ್ತರು ತುಂಬಿ ಹರಿಯುವ ಹಳ್ಳದ ಮೇಲೆ ಕಾಲುಸಂಕದಲ್ಲಿಯೇ ಶಿವನ ಸನ್ನಿದಾನ ತಲುಪಬೇಕಾಗಿದೆ.
ಕವಳೇಶ್ವರ ನೈಸರ್ಗಿಕವಾಗಿ ನಿರ್ಮಾಣವಾಗಿರುವ ಶಿವನ ದೇವಸ್ಥಾನ ಎನ್ನುವ ಕಾರಣಕ್ಕೆ ಪ್ರಸಿದ್ಧಿ ಪಡೆದಿದೆ. ಅಲ್ಲದೇ ಈ ಹಿಂದೆ ಪಾಂಡವರು ಬಂದು ಪೂಜೆ ಸಲ್ಲಿಸುತ್ತಿದ್ದರು ಎನ್ನುವ ಪ್ರತೀತಿಯೂ ಇದ್ದು, ಶಿವರಾತ್ರಿ ಸಂದರ್ಭದಲ್ಲಿ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
ದಟ್ಟ ಕಾಡಿನಲ್ಲಿ ಐದಾರು ಕಿಲೋ ಮೀಟರ್ ನಡೆದು ದೇವಸ್ಥಾನಕ್ಕೆ ಸಾಗಬೇಕಾಗಿರುವುದರಿಂದ ಪ್ರವಾಸ ಹಾಗೂ ಟ್ರೆಕ್ಕಿಂಗ್ ಮಾಡುವ ಉದ್ದೇಶದಿಂದಲೂ ಪ್ರತಿನಿತ್ಯ ಸಾಕಷ್ಟು ಮಂದಿ ಕವಳೇಶ್ವರ ಗುಹೆ ವೀಕ್ಷಣೆಗೆ ಆಗಮಿಸುತ್ತಾರೆ. ಆದರೆ ಇದೀಗ ಸೇತುವೆ ಕುಸಿದು ಬಿದ್ದಿರುವುದರಿಂದ ಜನರಿಗೆ ಓಡಾಡುವುದು ಸಾಧ್ಯವಿಲ್ಲ.
ಈ ಭಾಗದಲ್ಲಿ ಬೊಮ್ಮನಳ್ಳಿ ಜಲಾಶಯದ ನಿರಾಶ್ರಿತರು ವಾಸವಾಗಿದ್ದು ಕರ್ನಾಟಕ ಪವರ್ ಕಾರ್ಪೊರೇಷನ್‌ನ ಸಿಎಸ್ಆರ್ ನಿಧಿಯಲ್ಲಿ ಈ ಭಾಗಕ್ಕೆ ಸೇತುವೆ ನಿರ್ಮಿಸಿಕೊಟ್ಟಲ್ಲಿ ಅನುಕೂಲವಾಗಲಿದೆ ಅನ್ನೋದು ಇಲ್ಲಿನ ಸ್ಥಳೀಯರ ಬೇಡಿಕೆ.
ಇದನ್ನೂ ಓದಿ: ಗಡಿಕೇಶ್ವರ ಗ್ರಾಮಕ್ಕೆ ಸಚಿವ ಆರ್ ಅಶೋಕ್ ಭೇಟಿ: ಭೂಕಂಪ ಸಂತ್ರಸ್ತರಿಗೆ ಪರಿಹಾರ ವಿತರಣೆ