ಶಿರಸಿ : ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಪಕ್ಷ ನಾಪತ್ತೆಯಾಗಿದ್ದು, ಹಿಂದು ಫೈರ್ ಬ್ರಾಂಡ್ ಎದುರು ಹೀನಾಯ ಸೋಲುಂಡಿದೆ. ಕ್ಷೇತ್ರಾದ್ಯಂತ ದೋಸ್ತಿ ಅಭ್ಯರ್ಥಿ ಮುಗ್ಗರಿಸಿದ್ರೆ, ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ 6ನೇ ಬಾರಿ ಸಂಸತ್ ಪ್ರವೇಶಿಸಿ ಗೆಲುವಿನ ನಗೆ ಬೀರಿದ್ದಾರೆ.
ಉತ್ತರ ಕನ್ನಡದಲ್ಲಿ ಕಮಲ ಮತ್ತೊಮ್ಮೆ ಭರ್ಜರಿಯಾಗಿ ಅರಳಿದೆ. ದೋಸ್ತಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಬಿಜೆಪಿಯೆದುರು ಮುಗ್ಗರಿಸಿ ಬಿದ್ದಿದ್ದಾರೆ. ಅನಂತಕುಮಾರ್ ಹೆಗಡೆ 7,79,094 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಆನಂದ್ ಅಸ್ನೋಟಿಕರ್ 3,06,130 ಮತಗಳನ್ನು ಪಡೆದಿದ್ದಾರೆ. ಅನಂತಕುಮಾರ್ ಹೆಗಡೆ ಗೆಲುವಿನ ಅಂತರವೇ ಭಾರೀ ಮತಗಳಾಗಿದ್ದು, ಮತದಾರ ಬಿಜೆಪಿಗೇ ಅತಿಯಾದ ಒಲವು ತೋರಿದ್ದು ಸ್ಪಷ್ಟವಾಗಿದೆ.
ಆರಂಭದಿಂದಲೂ ಮುನ್ನಡೆ ಸಾಧಿಸಿದ್ದ ಬಿಜೆಪಿ ಅಭ್ಯರ್ಥಿ ಅಂತಿಮವಾಗಿ ಸುಮಾರು 4,75,000 ಮತಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಇನ್ನು ಅನಂತಕುಮಾರ್ ಹೆಗಡೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಏಳು ಬಾರಿ ಸ್ಪರ್ಧಿಸಿ ಆರು ಬಾರಿ ಗೆಲುವು ದಾಖಲಿಸುವ ಮೂಲಕ ಕ್ಷೇತ್ರದಲ್ಲಿ ಇತಿಹಾಸ ಬರೆದಿದ್ದಾರೆ. ಈ ಹಿಂದೆ ಕಾಂಗ್ರೆಸ್ನ ದೇವರಾಯ ಜಿ. ನಾಯ್ಕ ಮಾತ್ರ ಸತತ ನಾಲ್ಕು ಬಾರಿ ಗೆಲುವು ದಾಖಲಿಸಿದ್ದರು. ಇದೀಗ ಈ ದಾಖಲೆ ಸರಿಗಟ್ಟುವ ಜೊತೆಗೆ ಅತಿ ಹೆಚ್ಚು ಗೆಲುವು ದಾಖಲಿಸಿದವರ ಪೈಕಿ ಹೆಗಡೆ ಮೊದಲಿಗರಾಗಿದ್ದಾರೆ.
ಒಂದು ಕಾಲದಲ್ಲಿ ಬಿಜೆಪಿಯಲ್ಲಿ ಗುರು ಶಿಷ್ಯರಾಗಿದ್ದ ಅನಂತಕುಮಾರ್ ಹೆಗಡೆ ಹಾಗೂ ಆನಂದ್ ಅಸ್ನೋಟಿಕರ್ ಲೋಕಸಭಾ ಚುನಾವಣೆಯಲ್ಲಿ ಎದುರು ಬದುರಾಗಿ ಸ್ಪರ್ಧಿಸಿ ಬಿಗ್ ಫೈಟ್ ನಡೆಸಿದ್ದರು. ಗುರುವಿನ ವಿರುದ್ಧವೇ ತೊಡೆ ತಟ್ಟಿದ್ದ ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಭರ್ಜರಿ ಪ್ರಚಾರ ನಡೆಸಿದ್ದರು. ಆದರೆ ದೋಸ್ತಿ ನಿಯಮ ಪಾಲಿಸೋ ವಿಶ್ವಾಸದಿಂದ ಕಾಂಗ್ರೆಸ್ ಸಹಕಾರ ಸಿಗೋ ಭರವಸೆಯೊಂದಿಗೆ ಕಣಕ್ಕಿಳಿದಿದ್ದ ಜೆಡಿಎಸ್ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಸೋಲು ಕಂಡಿದ್ದಾರೆ.
ದೋಸ್ತಿಗೆ ದೋಖಾ ಮಾಡಲಾಗಿದೆ ಎಂಬ ಆರೋಪ ಇದೀಗ ಕ್ಷೇತ್ರದಲ್ಲಿ ವ್ಯಾಪಕವಾಗಿದೆ. ಕಾಂಗ್ರೆಸ್ ಹಿರಿಯ ಧುರೀಣ ಆರ್.ವಿ.ದೇಶಪಾಂಡೆ ಅವರು ಟಿಕೆಟ್ ಘೋಷಣೆಯೊಂದಿಗೆ ಆರಂಭಿಸಿದ್ದ ಅಸಹಕಾರ ಪ್ರಚಾರದ ಮೇಲೂ ಪರಿಣಾಮ ಬೀರಿದೆ ಎನ್ನುವ ಮಾತು ಕೇಳಿಬರುತ್ತಿದೆ.