ಭಟ್ಕಳ: ಯುವತಿಯೊಬ್ಬರ ಗರ್ಭಕೋಶದಲ್ಲಿದ್ದ ಬೃಹತ್ ಗಡ್ಡೆಯನ್ನು ಭಟ್ಕಳದ ತಾಲೂಕು ಸರ್ಕಾರಿ ಆಸ್ಪತ್ರೆ ವೈದ್ಯರು 3 ಗಂಟೆಗಳ ಸತತ ಶಸ್ತ್ರ ಚಿಕಿತ್ಸೆ ಬಳಿಕ ಹೊರತೆಗೆದು ಯುವತಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಭಟ್ಕಳ ತಾಲೂಕಿನ ಕಾರಗದ್ದೆಯ ಗುಡ್ ಲಕ್ ರೋಡಿನ ನಿವಾಸಿ ಲತಾ ದೇವಾಡಿಗ ಎಂಬ ಯುವತಿ ಋತುಸ್ರಾವದ ವೇಳೆ ಹೆಚ್ಚಿನ ರಕ್ತಸ್ರಾವವಾಗಿದ್ದರಿಂದ ಒಂದು ವಾರದ ಹಿಂದೆ ತಾಲೂಕು ಆಸ್ಪತ್ರೆಗೆ ಬಂದಿದ್ದಾರೆ. ನೋವು ತೀವ್ರವಾಗಿದ್ದರಿಂದ ವೈದ್ಯರು ಯುವತಿಯನ್ನ ಸ್ಕ್ಯಾನಿಂಗ್ಗೆ ಒಳಪಡಿಸಿದ್ದಾರೆ. ಈ ವೇಳೆ ವೈದ್ಯ ಶಮ್ಸನೂರ್ ಯುವತಿ ಗರ್ಭಕೋಶದಲ್ಲಿ ಬೃಹತ್ ಗಡ್ಡೆ ಇರುವುದು ಗೊತ್ತಾಗಿದೆ.
ಆದರೆ, ತಕ್ಷಣಕ್ಕೆ ಆಪರೇಷನ್ ಮಾಡುವ ಪರಿಸ್ಥಿತಿಯಲ್ಲಿ ವೈದ್ಯರು ಇರಲಿಲ್ಲ. ಯಾಕೆಂದರೆ, ಯುವತಿ ದೇಹದಲ್ಲಿ ಬಿಳಿ ರಕ್ತಕಣಗಳ ಕೊರತೆಯಿಂದ ಬಳುತ್ತಿದ್ದರಂತೆ. ಹೀಗಾಗಿ ಒಂದು ವಾರಗಳ ಕಾಲ ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದಾರೆ. ಬಳಿಕ ವೈದ್ಯ ಸವಿತಾ ಕಾಮತ್ ನೇತೃತ್ವದಲ್ಲಿ 3 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ಮಾಡಿ 12 ಸೆ.ಮೀ ಉದ್ದ 14 ಸೆ.ಮೀ ಅಗಲದ ಗಡ್ಡೆಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಯುವತಿ ಆರೋಗ್ಯವಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.