ಭಟ್ಕಳ: ಕರ್ನಾಟಕ ವಿಧಾನ ಪರಿಷತ್ ಬೆಂಗಳೂರು ಶಿಕ್ಷಕರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ-2020ರ ಕಾರ್ಯಸೂಚಿಯನ್ನು ಕೇಂದ್ರ ಚುನಾವಣಾ ಆಯೋಗವು ನೀಡಿದ್ದು, ತಾಲೂಕಿನಲ್ಲಿ ಸೆಪ್ಟೆಂಬರ್ 29 ರಿಂದ ನವೆಂಬರ್ 05 ರವರೆಗೆ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ತಹಶೀಲ್ದಾರ್ ಎಸ್. ರವಿಚಂದ್ರ ತಿಳಿಸಿದ್ದಾರೆ.
ಈಗಾಗಲೇ ತಾಲೂಕಿನಲ್ಲಿ ಚುನಾವಣಾ ಹಿನ್ನೆಲೆ ಮಾದರಿ ನೀತಿ ಸಂಹಿತೆ ತಂಡವನ್ನು ರಚನೆ ಮಾಡಲಾಗಿದ್ದು, ಸೆಕ್ಟರ್ ಅಧಿಕಾರಿಗಳು, ಕ್ಲೇಮ್ ಸ್ಕೋಡ್, ಮಾದರಿ ನೀತಿ ಸಂಹಿತೆ ನಿರ್ವಹಣೆಯೂ ನಡೆಯುತ್ತಿದೆ.
ಒಟ್ಟು ತಾಲೂಕಿನಲ್ಲಿ 969 ಮತದಾರರಿದ್ದು, ಈಗಾಗಲೇ ಹೆಸರು ನೋಂದಣಿ ಕಾರ್ಯ ಮುಕ್ತಾಯಗೊಂಡಿದೆ. ಅಕ್ಟೋಬರ್ 28 ರಂದು ತಾಲೂಕಿನಲ್ಲಿನ ಒಂದೇ ಚುನಾವಣಾ ಮತಗಟ್ಟೆಯಾದ ತಹಶೀಲ್ದಾರ್ ಕಚೇರಿ ಕಾರ್ಯಲಯದಲ್ಲಿ ಮತದಾನ ನಡೆಯಲಿದೆ.
ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡು ಇಂದೇ ಮುಕ್ತಾಯಗೊಳ್ಳಲಿದೆ. ಅಕ್ಟೋಬರ್ 9 ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಅಕ್ಟೋಬರ್ 12 ರಂದು ಕೊನೆಯ ದಿನಾಂಕವಾಗಿದೆ. ಅಕ್ಟೋಬರ್ 28 ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ನವೆಂಬರ್ 02 ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದ್ದು, ಚುನಾವಣಾ ಕಾರ್ಯ ನವೆಂಬರ್ 5 ರಂದು ಮುಕ್ತಾಯಗೊಳ್ಳಲಿದೆ ಎಂದರು.
ಕೋವಿಡ್ ಪರೀಕ್ಷೆ, ಮಾಸ್ಕ್ ಧರಿಸದಿದ್ದಲ್ಲಿ ದಂಡ:
ಜಿಲ್ಲಾಧಿಕಾರಿಗಳ ಸೂಚನೆಯಂತೆ ಕೋವಿಡ್ ಪರೀಕ್ಷೆ ಹೆಚ್ಚು ಹೆಚ್ಚು ಮಾಡಲಾಗಿದ್ದು, ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ದಿನವೂ 250 ಕೋವಿಡ್ ಪರೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ. ಇದರಿಂದ ಕಳೆದ 10 ದಿನದಲ್ಲಿ ಕೇವಲ ಒಂದು ಮರಣ ಪ್ರಕರಣ ದಾಖಲಾಗಿದ್ದು, ಸಮಾಧಾನಕರ ಸಂಗತಿಯಾಗಿದೆ ಎಂದು ತಹಶೀಲ್ದಾರ್ ಎಸ್. ರವಿಚಂದ್ರ ಹೇಳಿದ್ದಾರೆ.
ಮಾಸ್ಕ್ ಧರಿಸದೇ ಬರುವವರಿಗೆ ದಂಡ ವಿಧಿಸಲಾಗುತ್ತಿದ್ದು, ನಗರ ಭಾಗದಲ್ಲಿ 250 ರೂ. ಹಾಗೂ ಗ್ರಾಮೀಣ ಭಾಗದಲ್ಲಿ 100 ರೂ. ನಂತೆ ದಂಡ ಹಾಕಲಾಗುತ್ತಿದೆ. ಕಳೆದ 20 ದಿನದಲ್ಲಿ ಪುರಸಭೆ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 60 ಸಾವಿರ ರೂ. ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ 30 ಸಾವಿರ ರೂ. ದಂಡ ವಿಧಿಸಲಾಗಿದೆ.