ಭಟ್ಕಳ: ತಾಲೂಕು ಕೋವಿಡ್ ಮುಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕೆಂದು ಆಗ್ರಹಿಸಿ ಭಟ್ಕಳದ ನಾಗರಿಕರು ಸಹಾಯಕ ಆಯುಕ್ತರ ಮೂಲಕ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನೆರೆಯ ಉಡುಪಿ ಜಿಲ್ಲೆಯಲ್ಲಿ ಹೋಂ ಕ್ವಾರಂಟೈನ್ನಲ್ಲಿದ್ದವರು ಮನೆಗಳಿಗೆ ತೆರಳಿದ ಬಳಿಕ ಕೊರೊನಾ ಸೋಂಕು ವ್ಯಾಪಕವಾಗಿ ಹರಡಿಕೊಂಡಿದೆ. ಹಾಗಾಗಿ ಉಡುಪಿ ಜಿಲ್ಲೆಯಿಂದ ಭಟ್ಕಳ ತಾಲೂಕಿಗೆ ಬರುವವರ ಮೇಲೆ ಕಣ್ಗಾವಲು ಇಡುವಂತೆ ಮತ್ತು ಅವರ ಕುರಿತು ಸಮರ್ಪಕ ಮಾಹಿತಿಯನ್ನು ಸಂಗ್ರಹಿಸುವಂತೆ ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.
ಹೊರ ದೇಶ ಹಾಗೂ ರಾಜ್ಯಗಳಿಂದ ಭಟ್ಕಳಕ್ಕೆ ಬರುವವರನ್ನು 7 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಹಾಗೂ 14 ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿಡಬೇಕು. ಕೂಡಲೇ ಅವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೊಳಪಡಿಸಬೇಕು. ಮಹಾರಾಷ್ಟ್ರದಿಂದ ಬಂದ ಜನರು ಗದಗ, ಹುಬ್ಬಳ್ಳಿ, ಧಾರವಾಡದಿಂದ ಬಂದಿದ್ದೇವೆ ಎಂದು ಹೇಳಿಕೊಂಡು ತಾಲೂಕಿಗೆ ಬರುತ್ತಿದ್ದಾರೆ. ಹಾಗಾಗಿ ಭಟ್ಕಳಕ್ಕೆ ಬಂದವರ ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಬೇಕೆಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.