ಕಾರವಾರ : ಇಷ್ಟರಲ್ಲಾಗಲೇ ಆರಂಭವಾಗಬೇಕಿದ್ದ ಮಳೆ ಕೈಕೊಟ್ಟಿದ್ದು, ಉತ್ತರಕನ್ನಡ ಜಿಲ್ಲೆಯಾದ್ಯಂತ ಹನಿ ನೀರಿಗೂ ಹಾಹಾಕಾರ ಶುರುವಾಗಿದೆ. ಇನ್ನೂ ಮುಂಗಾರು ತಡವಾದರೇ ಜನ ಜಾನುವಾರುಗಳು ಮತ್ತಷ್ಟು ಸಮಸ್ಯೆಗೆ ಸುಲುಕಲಿದ್ದು, ಎಲ್ಲರೂ ಮಳೆಗಾಗಿ ಮುಗಿಲು ನೋಡುತ್ತಿದ್ದಾರೆ. ಈ ನಡುವೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ-ಹೊನ್ನಾವರ ಶಾಸಕ ಸುನೀಲ ನಾಯ್ಕ್ ಮಳೆಗಾಗಿ ದೇವರ ಮೋರೆ ಹೋಗಿದ್ದಾರೆ.
ಜಿಲ್ಲೆಯ ಭಟ್ಕಳ ತಾಲೂಕಿನಲ್ಲೂ ನೀರಿನ ಸಮಸ್ಯೆ ಮಿತಿಮೀರಿದೆ. ಭಟ್ಕಳದ ಕಡುವಿನಕಟ್ಟೆ ಜಲಾಶಯದಲ್ಲಿ ಹೂಳು ತುಂಬಿಕೊಂಡಿದ್ದು, ನೀರು ಈಗಾಗಲೇ ಬರಿದಾಗಿದೆ. ಭಟ್ಕಳದಾದ್ಯಂತ ಇರುವ ಬಹುತೇಕ ಕೆರೆಗಳು ಬತ್ತಿಹೋಗಿದ್ದು, ಹನಿ ನೀರಿಗೂ ಹಾಹಾಕಾರ ಶುರುವಾಗಿದೆ. ಇದನ್ನೆಲ್ಲ ಗಮನಿಸಿದ ಶಾಸಕ ಸುನೀಲ್ ನಾಯ್ಕ್ ಇದೀಗ ದೇವರ ಮೊರೆ ಹೋಗಿದ್ದಾರೆ. ಭಟ್ಕಳದ ಚನ್ನಪಟ್ಟಣ ಹನುಮಂತ ದೇವರ ದೇವಸ್ಥಾನಕ್ಕೆ ಬೆಂಬಲಿಗರೊಂದಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೆ ನಾಡಿನಾದ್ಯಂತ ಮಳೆಗೆ ವಿಶೇಷ ಪ್ರಾರ್ಥನೆಯನ್ನೂ ಸಲ್ಲಿಸಿದ್ದಾರೆ.
ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಳೆಯ ಕೊರತೆ ಉಂಟಾಗಿದ್ದು, ಕುಡಿಯುವ ನೀರಿನ ಅಭಾವ ತಲೆದೂರಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಒಂದೂವರೆ ತಿಂಗಳಿನಿಂದ ಜಿಲ್ಲೆಯಲ್ಲಿ ಮಳೆ ಬಂದಿಲ್ಲ. ಜನರಿಗೆ ಟ್ಯಾಂಕರ್ ನೀರು ಪೂರೈಸಲು ಕೂಡ ಎಲ್ಲಿಂದ ನೀರು ತರಬೇಕು ಎನ್ನುವುದು ಗೊತ್ತಾಗುತ್ತಿಲ್ಲ ಎಂದು ಅವರು ಹೇಳಿದರು.
ಈ ಎಲ್ಲ ಕಾರಣದಿಂದ ಸಾರ್ವಜನಿಕರ ಪರವಾಗಿ ದೇವರಿಗೆ ವಿಶೇಷ ಸೇವೆ ನೀಡಿದ್ದೇವೆ. ಎರಡು–ಮೂರು ದಿನಗಳಲ್ಲೇ ಜಿಲ್ಲೆಯಲ್ಲಿ ಮಳೆಯಾಗಲಿ. ಬತ್ತಿರುವ ಜಲ ಮೂಲಗಳು ಜೀವ ಪಡೆದುಕೊಳ್ಳಲಿ ಎಂದು ಬೇಡಿಕೊಂಡಿದ್ದೇವೆ ಎಂದು ತಿಳಿಸಿದರು. ಈಗಾಗಲೇ ಕಡವಿನಕಟ್ಟೆ ಜಲಾಶಯದಲ್ಲಿ ಹೂಳೆತ್ತಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಭಟ್ಕಳದ ಎಲ್ಲ ಸಣ್ಣ, ದೊಡ್ಡ ನೀರಿನ ಮೂಲಗಳ ಹೂಳೆತ್ತುವ ಕಾರ್ಯ ಮಾಡಲಾಗುವುದು ಎಂದೂ ಅವರು ಈ ವೇಳೆ ತಿಳಿಸಿದ್ದಾರೆ.