ಕಾರವಾರ : ಹಾರಲು ಸಾಧ್ಯವಾಗದೇ ಅಸ್ವಸ್ಥಗೊಂಡು ಮನೆ ಮಹಡಿ ಮೇಲೆ ಬಂದು ಕುಳಿತಿದ್ದ ಅಪರೂಪದ ಕಣಜ ಗೂಬೆಗೆ ಚಿಕಿತ್ಸೆ ಕೊಡಿಸಿರುವ ಘಟನೆ ಮುಂಡಗೋಡ ಪಟ್ಟಣದಲ್ಲಿ ನಡೆದಿದೆ.
ಇಲ್ಲಿನ ಬಿಎಸ್ಎನ್ಎಲ್ ವಸತಿ ಸಮುಚ್ಛಯದ ಮಹಡಿ ಮೇಲೆ ಅಪರೂಪದ ಪ್ರಬೇಧಕ್ಕೆ ಸೇರಿದ ಕಣಜ ಗೂಬೆ (barn owl) ಪ್ರತ್ಯಕ್ಷವಾಗಿತ್ತು. ಅಪರೂಪದ ಈ ಪಕ್ಷಿಯನ್ನು ಕಂಡ ಸ್ಥಳೀಯರು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ಅರಣ್ಯ ಇಲಾಖೆ ಸಿಬ್ಬಂದಿ ಶ್ರೀಧರ ಭಜಂತ್ರಿ ಹಾಗೂ ಸಹಾಯಕ ಶಿವಪ್ಪ ಭೇಟಿ ನೀಡಿ, ಅಪರೂಪದ ಕಣಜ ಗೂಬೆಯನ್ನು ಹಿಡಿದು ಪಶು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು.
ಕಣಜ ಗೂಬೆಯು ಹಾರಲು ಆಗದೇ, ತೀವ್ರ ಅಸ್ವಸ್ಥಗೊಂಡಿದ್ದರಿಂದ, ಪಶು ವೈದ್ಯ ಡಾ. ಜಯಚಂದ್ರ ಕೆಂಪಶಿ ಚಿಕಿತ್ಸೆ ನೀಡಿ, ಪಶು ಆಸ್ಪತ್ರೆಯ ಕಟ್ಟಡದಲ್ಲಿಯೇ ಬಿಟ್ಟು, ಒಂದೆರಡು ದಿನ ಅದರ ಮೇಲೆ ನಿಗಾ ಇಡುವುದಾಗಿ ಹೇಳಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಪ್ರತಿ ವರ್ಷ ಕಣಜ ಗೂಬೆಯ ಸಂತತಿ ಕಡಿಮೆಯಾಗುತ್ತಾ ಬರುತ್ತಿದೆ. ಈ ಗೂಬೆ ಪಟ್ಟಣದ ದೊಡ್ಡ ಕಟ್ಟಡಗಳ ಕೆಳಗಡೆ ಗೂಡು ಕಟ್ಟಿಕೊಡು ಸಂತಾನೋಭಿವೃದ್ಧಿ ಮಾಡುತ್ತದೆ. ಆದರೆ, ಹಾಕಿರುವ ಮೂರು ಮೊಟ್ಟೆಗಳಲ್ಲಿ ಒಂದು ಅಥವಾ ಎರಡು ಮಾತ್ರ ಮರಿ ಆಗುವ ಸಾಧ್ಯತೆ ಇರುತ್ತದೆ.
ಕಣಜ ಗೂಬೆ ಇಲಿಗಳನ್ನು ಆಹಾರವಾಗಿ ತಿನ್ನುತ್ತದೆ. ಇದರಿಂದ ಇಲಿಗಳಿಂದ ಆಹಾರ ಧಾನ್ಯಗಳು ಹಾನಿಯಾಗುವುದನ್ನು ಕಣಜ ಗೂಬೆ ತಪ್ಪಿಸುತ್ತದೆ. ಹೀಗಾಗಿ, ಕಣಜ ಗೂಬೆ ರೈತರಿಗೆ ವರದಾನವಾಗಿದೆ ಎಂದು ಅರಣ್ಯ ರಕ್ಷಕ ಶ್ರೀಧರ ಭಜಂತ್ರಿ ಹೇಳಿದರು.