ಕಾರವಾರ : ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಹಾಡಹಗಲಲ್ಲೇ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಲು ಕೊಂಡೊಯ್ಯುತ್ತಿದ್ದರು. ಈ ವೇಳೆ ಸಿನಿಮೀಯ ಶೈಲಿಯಲ್ಲಿ ಅಧಿಕಾರಿಗಳು ಚೇಸ್ ಮಾಡಿ ದಾಳಿ ನಡೆಸಿದ್ದು, ಮನೆಯಲ್ಲಿ ದಾಸ್ತಾನು ಇರಿಸಿದ್ದ ಕ್ವಿಂಟಾಲ್‌ಗಟ್ಟಲೇ ಪಡಿತರ ಕಂಡು ಅಧಿಕಾರಿಗಳೇ ಶಾಕ್ ಆಗಿದ್ದಾರೆ.
ಅಂಕೋಲಾ ತಾಲೂಕಿನ ಕೇಣಿ ಗ್ರಾಮದ ರತ್ನಾಕರ್ ನಾಯ್ಕ್ ಎನ್ನುವವರ ಮನೆಯಲ್ಲಿ ಪಡಿತರವನ್ನ ದಾಸ್ತಾನು ಇರಿಸಿಲಾಗಿತ್ತು. ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್ ಉದಯ್ ಕುಂಬಾರ್, ಆಹಾರ ನಿರೀಕ್ಷಕ ಸಂತೋಷ್ ಎಳಗದ್ದೆ ಹಾಗೂ ಪೊಲೀಸರನ್ನೊಳಗೊಂಡ ತಂಡ ಮನೆಯ ಮೇಲೆ ದಾಳಿ ನಡೆಸಿದೆ.
ಈ ವೇಳೆ ಅಧಿಕಾರಿಗಳಿಗೆ ಬರೋಬ್ಬರಿ 94 ಕ್ವಿಂಟಲ್ ಅಕ್ಕಿ, 50 ಕೆಜಿ ಗೋಧಿ, 9.95 ಕೆಜಿ ತೊಗರಿಬೇಳೆ, 19 ಕ್ವಿಂಟಾಲ್ ಕುಚಲಕ್ಕಿ ದಾಸ್ತಾನು ಇರುವುದು ಕಂಡು ಬಂದಿದೆ. ಇದಷ್ಟೇ ಅಲ್ಲದೇ ಒಂದು ಬ್ಯಾಗ್ ಹೊಲಿಯುವ ಯಂತ್ರ ಮತ್ತು ತೂಕ ಮಾಡುವ ಯಂತ್ರ ಹಾಗೂ ಅಕ್ಕಿ ತುಂಬುವಂತಹ 20 ಖಾಲಿ ಚೀಲಗಳನ್ನು ವಶಪಡಿಸಿಕೊಂಡಿದ್ದಾರೆ.
ದಾಳಿ ಮಾಡಲಾದ ಮನೆಯಲ್ಲಿ ಹಿಂದಿನಿಂದಲೂ ಅಕ್ಕಿಯನ್ನು ದಾಸ್ತಾನು ಮಾಡಲಾಗುತ್ತಿತ್ತು ಎನ್ನುವ ಮಾತುಗಳು ಕೇಳಿ ಬಂದಿದ್ದವು. ಈ ಕುರಿತು ಖಚಿತ ಮಾಹಿತಿ ಪಡೆದುಕೊಂಡ ಅಧಿಕಾರಿಗಳು ಪಡಿತರವನ್ನು ದಾಸ್ತಾನು ಮಾಡಲು ಸಾಗಿಸುತ್ತಿದ್ದ ವೇಳೆಯೇ ಲಾರಿಯನ್ನು ಹಿಂಬಾಲಿಸಿ ದಾಳಿ ನಡೆಸಿದ್ದಾರೆ. ಇನ್ನು ಅಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಕರಾವಳಿ ಭಾಗದಲ್ಲಿ ಬಹುತೇಕ ಜನರು ಕುಚಲಕ್ಕಿಯನ್ನ ಆಹಾರವಾಗಿ ಸೇವಿಸುತ್ತಾರೆ. ಹೀಗಾಗಿ, ಅಕ್ಕಿ ದಾಸ್ತಾನು ಪತ್ತೆಯಾದ ಮನೆಯ ಮಾಲೀಕರಿಗೆ ಜನರೇ ತಮ್ಮ ಪಡಿತರ ಅಕ್ಕಿಯನ್ನ ತಂದುಕೊಟ್ಟು ಕುಚಲಕ್ಕಿ ಕೊಂಡೊಯ್ಯುತ್ತಿದ್ದರು. ಇದು ಯಾವುದೇ ಅಕ್ರಮ ದಂಧೆಯಲ್ಲವಾಗಿದ್ದು, ನೆರೆಯ ಕರಾವಳಿ ಜಿಲ್ಲೆಗಳಿಗೆ ಕುಚಲಕ್ಕಿ ನೀಡುವ ಸರ್ಕಾರ ಉತ್ತರಕನ್ನಡಕ್ಕೆ ತಾರತಮ್ಯ ಮಾಡುತ್ತಿದೆ. ಹೀಗಾಗಿ, ಪಡಿತರ ಅಂಗಡಿಗಳಲ್ಲೇ ಕುಚಲಕ್ಕಿ ನೀಡುವಂತಾಗಬೇಕು ಎನ್ನುವ ಅಭಿಪ್ರಾಯ ಸಹ ವ್ಯಕ್ತವಾಗಿದೆ.
ಇದನ್ನೂ ಓದಿ: ಬೆಳಗಾವಿ ರಾಜಕಾರಣಿಗಳು, ಅಧಿಕಾರಿಗಳು ಮರಾಠಿ ಏಜೆಂಟರು, ಮಹಾರಾಷ್ಟ್ರಕ್ಕೆ ಒಂದು ಅಂಗುಲ ಜಾಗವೂ ಕೊಡಲ್ಲ.. ವಾಟಾಳ್