ಕಾರವಾರ : ಬೇಸಿಗೆ ವೇಳೆ ಹತ್ತಾರು ಗ್ರಾಮಗಳ ಕೃಷಿ ಭೂಮಿಗೆ ನೀರು ಪೂರೈಕೆ ಮಾಡುತ್ತಿದ್ದ ಕೆರೆಯೊಂದು ಕಳೆದ ಹಲವು ವರ್ಷಗಳಿಂದ ನಿರ್ವಹಣೆ ಇಲ್ಲದೆ ಪಾಳು ಬಿದ್ದಿತ್ತು. ಕೆರೆ ಅಭಿವೃದ್ಧಿಗೆ ಸರ್ಕಾರ ಒಂದು ಕೋಟಿ ರೂ. ಅನುದಾನ ಕೂಡ ನೀಡಿತ್ತು. ಆದರೆ, ಗುತ್ತಿಗೆದಾರರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅರೆಬರೆ ಕಾಮಗಾರಿ ನಡೆದು ಈ ಬಾರಿ ಸಹ ಬೆಳೆ ಬೆಳೆಯಲಾಗದ ಸ್ಥಿತಿ ನಿರ್ಮಾಣವಾಗಿದೆ.
ಕಾರವಾರ ತಾಲೂಕಿನ ಮುಡಗೇರಿ ವ್ಯಾಪ್ತಿಯಲ್ಲಿ ಕಳೆದ 40 ವರ್ಷಗಳ ಹಿಂದೆ ಡೆನ್ಮಾರ್ಕ್ ದೇಶದ ಧನ ಸಹಾಯದಿಂದ 7 ಎಕರೆ ಪ್ರದೇಶದಲ್ಲಿದ್ದ ಅರ್ಥಲಾವ್ ಕೆರೆಯನ್ನು 1,800 ಎಕರೆ ಪ್ರದೇಶದಲ್ಲಿ ನೀರು ತುಂಬುವಂತೆ ಅಭಿವೃದ್ಧಿಪಡಿಸಲಾಗಿತ್ತು. ಇದರಿಂದ ಮುಡಗೇರಿ ಪಂಚಾಯತ್ ವ್ಯಾಪ್ತಿಯ ಹತ್ತಾರು ಗ್ರಾಮಗಳಿಗೆ ಬೇಸಿಗೆಯಲ್ಲಿಯೂ ಕೃಷಿ ಚಟುವಟಿಕೆ ನಡೆಸಲು ಅನುಕೂಲವಾಗಿತ್ತು. ಮಾತ್ರವಲ್ಲದೆ, ಈ ಭಾಗದಲ್ಲಿ ಪಾಳು ಬಿದ್ದಿದ್ದ ನೂರಾರು ಎಕರೆ ಭೂಮಿಯಲ್ಲಿ ಕಲ್ಲಂಗಡಿ, ಭತ್ತ ಸೇರಿದಂತೆ ಇನ್ನಿತರೆ ಬೆಳೆಗಳನ್ನು ಬೆಳೆಯಲು ಪ್ರಾರಂಭಿಸಿದ್ದರು.
ಆದರೆ, ಸಣ್ಣ ನೀರಾವರಿ ಇಲಾಖೆಯು ಕೆರೆಯ ನಿರ್ವಹಣೆ ಬಗ್ಗೆ ಗಮನ ಹರಿಸದ ಕಾರಣ ಹಲವು ಬಾರಿ ದುರಸ್ಥಿಗೆ ತಲುಪಿತ್ತು. ಆದರೂ, ಸರ್ಕಾರ ಕೆರೆ ಅಭಿವೃದ್ಧಿಗೆ ಕೋಟಿ ಕೋಟಿ ಹಣ ಸುರಿದಿದೆ. 2018-19ರಲ್ಲಿ ಕೆರೆಯ ಗೇಟ್ ಹಾಗೂ ಕಾಲುವೆ ಅಭಿವೃದ್ಧಿಪಡಿಸಲು ಒಂದು ಕೋಟಿ ಬಿಡುಗಡೆ ಮಾಡಿದೆ. ಕಾಮಗಾರಿ ಅವಧಿ ಮುಗಿದು ವರ್ಷವಾದ್ರು ಅರೆಬರೆ ಕಾಮಗಾರಿ ನಡೆಸಿರುವ ಗುತ್ತಿಗೆದಾರರು, ಇತ್ತ ಮುಖ ಹಾಕುತ್ತಿಲ್ಲ. ಕೆರೆಗೆ ಬಂದ ಹಣವನ್ನು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸೇರಿ ನುಂಗಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಬಾರಿ ಉತ್ತಮ ಮಳೆಯಾದ ಕಾರಣ ಅರ್ಥಲಾವ್ ಕೆರೆ ಭರ್ತಿಯಾಗಿತ್ತು. ಆದರೆ, ಕೆರೆಯ ಗೇಟ್ ತುಕ್ಕು ಹಿಡಿದು ದುರಸ್ಥಿಗೊಂಡ ಕಾರಣ ನೀರು ಸೋರಿಕೆಯಾಗಿದೆ. ಈಗಾಗಲೇ ಕೆರೆ ಒಣಗಿ ಹೋಗುತ್ತಿದೆ. ಇದೇ ಕಾರಣಕ್ಕೆ ಈ ಬಾರಿ ಸುಮಾರು 70 ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗದೆ ಕೈಬಿಟ್ಟಿದ್ದಾರೆ. ಈ ಬಗ್ಗೆ ಸ್ಥಳೀಯರು ಗ್ರಾಮ ಪಂಚಾಯತ್ ಎದುರು ಧರಣಿ ನಡೆಸಿದ್ದಾರೆ.
ಈ ಕುರಿತು ಅಧಿಕಾರಿಗಳನ್ನು ಕೇಳಿದ್ರೆ, ಕೊರೊನಾ ಕಾರಣದಿಂದಾಗಿ ಮತ್ತು ಕೆರೆಯಲ್ಲಿ ನೀರು ತುಂಬಿಕೊಂಡಿದ್ದರಿಂದ ಕಾಮಗಾರಿ ನಡೆಸಲು ಸಾಧ್ಯವಾಗಿಲ್ಲ. ಮುಂದಿನ ಎರಡು ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸುವುದಾಗಿ ತಿಳಿಸಿದ್ದಾರೆ. ಕೃಷಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆರೆ ಅಭಿವೃದ್ಧಿಗೆ ಕೋಟಿಗಟ್ಟಲೆ ಹಣ ಸುರಿದರೂ ಕೂಡ ಕಾಮಗಾರಿ ನಡೆಯದೆ ಯಾವುದೇ ಪ್ರಯೋಜನಕ್ಕೆ ಬಾರದಂತಾಗಿದೆ. ಇನ್ನಾದರೂ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಇತ್ತ ಗಮನಹರಿಸಿ ಕಾಮಗಾರಿ ಪೂರ್ಣಗೊಳಿಸಬೇಕಿದೆ.
ಇದನ್ನೂ ಓದಿ: ಮೇಲ್ಮನೆ ಚುನಾವಣೆ ಪ್ರಕಟ : ಸಚಿವ ಸಂಪುಟ ವಿಸ್ತರಣೆಗೆ ಮತ್ತೆ ವಿಘ್ನ!?