ಕಾರವಾರ: ರೈಲ್ವೆ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ಹೇಳಿ ಮಹಿಳೆಗೆ ವಂಚನೆ ಮಾಡಿದ ಆರೋಪದ ಮೇರೆಗೆ ವ್ಯಕ್ತಿಯೋರ್ವನನ್ನು ಕಾರವಾರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
![Hrushikesh Dipak Jhadav](https://etvbharatimages.akamaized.net/etvbharat/prod-images/kn-kwr-02-vanchanearopiarrest-7202800_07072019104547_0707f_1562476547_486.jpg)
ಮಹಾರಾಷ್ಟ್ರದ ವಿದ್ಯುತ್ ಸರಬರಾಜು ಇಲಾಖೆಯಲ್ಲಿ ಜ್ಯೂನಿಯರ್ ಟೆಕ್ನಿಶಿಯನ್ ಆಗಿ ಕಾರ್ಯನಿರ್ವಹಿಸುತ್ತಿರುವ ಹೃಷಿಕೇಶ್ ದೀಪಕ ಜಾಧವ(41) ಬಂಧಿತ ಆರೋಪಿ. ಈತ ಕೊಲ್ಲಾಪುರ ಮೂಲದವನಾಗಿದ್ದು, ನಗರದ ಕೆಹೆಚ್‍ಬಿ ಕಾಲೋನಿಯ ಆಶಾ ಬಾಡ್ಕರ್ ಎಂಬುವವರ ಮಗನಿಗೆ ಅಕ್ಟೋಬರ್ 2015ರಲ್ಲಿ ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ 15 ಲಕ್ಷ ರೂ. ಪಡೆದುಕೊಂಡಿದ್ದನಂತೆ. ಬಳಿಕ ಕಳೆದ ವರ್ಷ ಜನವರಿಯಲ್ಲಿ ಸುಳ್ಳು ನೌಕರಿ ಆದೇಶ ಪತ್ರವನ್ನು ನೀಡಿ ವಂಚಿಸಿದ್ದಾನೆ ಎನ್ನಲಾಗಿದೆ.
ಈ ವಿಚಾರ ಬಯಲಾದಾಗ ಹಣವನ್ನು ಮರಳಿಸುವಂತೆ ಆಶಾ ಬಾಡ್ಕರ್ ಒತ್ತಾಯಿಸಿದ್ದಾರೆ. ಆದರೆ ಆತ ತಲೆಮರೆಸಿಕೊಂಡು ಓಡಾಡುತ್ತಿದ್ದಾನೆ ಎಂದು ಆಶಾ ಬಾಡ್ಕರ್ ದೂರು ನೀಡಿದ್ದರು. ಈತ ಇದೇ ರಿತಿ ಹಲವರಿಗೆ ಸರ್ಕಾರಿ ನೌಕರಿ ನೀಡುವುದಾಗಿ ಹೇಳಿ ವಂಚನೆ ಮಾಡಿದ್ದಾನೆ ಎನ್ನಲಾಗಿದೆ. ಅದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಈ ಹಿಂದೆಯೂ ಇಂತಹ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಹುಬ್ಬಳ್ಳಿ, ಬಿಜಾಪುರ ಸೇರಿದಂತೆ ಇನ್ನಿತರ ಕಡೆ ಪೊಲೀಸರಿಗೆ ಬೇಕಾಗಿದ್ದ ಎನ್ನಲಾಗಿದೆ. ಈ ಪ್ರಕರಣ ಕುರಿತು ಸಿಪಿಐ ಶಿವಕುಮಾರ ನೇತೃತ್ವದಲ್ಲಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.