ಭಟ್ಕಳ: ಶ್ರೀರಾಮ ಸೇನೆ ರಾಜ್ಯ ಉಪಾಧ್ಯಕ್ಷ ಜಯಂತ ನಾಯ್ಕನನ್ನು ಪ್ರಕರಣವೊಂದರಲ್ಲಿ ಬಂಧಿಸಲಾಗಿದೆ.
ಮುರುಡೇಶ್ವರದಲ್ಲಿ ಕಳೆದ ತಿಂಗಳು ನೇತ್ರಾಣಿ ಸ್ಕೂಬಾ ಡೈವಿಂಗ್ ಮಾಲೀಕನ ಬಳಿ ಹಫ್ತಾ ವಸೂಲಿ ಕೇಳಿದಾಗ ಕೊಡದಿದ್ದಕ್ಕೆ ಜೀವ ಬೆದರಿಕೆ ಹಾಕಿದ್ದರು ಎಂಬ ಆರೋಪದ ಮೇಲೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹರಿಕಾಂತ ಎಂಬುವರು ಜನವರಿ 2 ರಂದು ಮುರುಡೇಶ್ವರದ ಸಮುದ್ರ ತೀರದಲ್ಲಿದ್ದನ್ನು ಗಮನಿಸಿದ ಆರೋಪಿ ಅವಾಚ್ಯ ಶಬ್ದದಿಂದ ಬೈದು, ನಿಂದಿಸಿ ಸ್ಕೂಬಾ ಡೈವಿಂಗ್ ಹಾಗೂ ಉತ್ತರ ಕನ್ನಡ ಸಿರಿ ಉತ್ಪನ್ನಗಳ ಅಂಗಡಿಯನ್ನು ನಡೆಸಬೇಕಾದರೆ ತಿಂಗಳಿಗೆ ಹಫ್ತಾ ನೀಡಬೇಕೆಂದು ಬೆದರಿಕೆಯೊಡ್ಡಿದ್ದಾನಂತೆ.
ಸ್ಕೂಬಾ ಡೈವಿಂಗ್ಗೆ ತರಬೇತಿ ನೀಡುವ ತರಬೇತುದಾರರಿಗೂ ಜೀವ ಬೆದರಿಕೆ ಹಾಕಿದ ಕಾರಣ ಅವರು ಸಹ ಕೆಲಸಕ್ಕೆ ಬರುತ್ತಿಲ್ಲವಂತೆ. ಮುರುಡೇಶ್ವರಕ್ಕೆ ಬರುವ ಪ್ರವಾಸಿಗರಿಗೂ ಸ್ಕೂಬಾ ಡೈವಿಂಗ್ ಬಗ್ಗೆ ತಪ್ಪು ಮಾಹಿತಿ ನೀಡಿ ಪ್ರವಾಸಿಗರು ಸ್ಕೂಬಾ ಡೈವಿಂಗ್ ಬಾರದಂತೆ ಮಾಡಿ ಆರ್ಥಿಕವಾಗಿ ನಷ್ಟ ಅನುಭವಿಸುವಂತೆ ಆಗಿದೆ ಎಂದು ದೂರುದಾರ ಹರಿಕಾಂತ್ ತಾವು ನೀಡಿರುವ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದು, ಜಯಂತ ನಾಯ್ಕ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣೇಶ ಹರಿಕಾಂತ ಕೆಲವೊಂದು ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿರುವ ಬಗ್ಗೆ ದಾಖಲೆ ಕಲೆ ಹಾಕಿದ್ದರು. ಈ ಬಗ್ಗೆ ದೂರು ಸಹ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಯಂತ ನಾಯ್ಕ ಅವರನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಈ ದೂರು ನೀಡಿ ಅವರನ್ನು ಬಂಧಿಸಿದ್ದಾರೆ ಎಂದಿದ್ದಾರೆ.