ಶಿರಸಿ: ಸಿ.ಒ.ಡಿ. ಇನ್ಸ್ಪೆಕ್ಟರ್ ಮಹೇಶ್ ಎಂದು ಹೇಳಿಕೊಂಡು ಮೆಡಿಕಲ್ ಲ್ಯಾಬ್ ಒಂದರ ಮಾಹಿತಿ ಎಗರಿಸಿದ್ದ ನಕಲಿ ಪೋಲಿಸಪ್ಪನನ್ನು ಬಂಧಿಸುವಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಶಿರಸಿ ತಾಲೂಕಿನ ಕಾನಗೋಡಿನ ಲಕ್ಷ್ಮೀಕಾಂತ ಈಶ್ವರ ನಾಯ್ಕ (32) ಬಂಧಿತ ಆರೋಪಿ. ಈತ ಪೊಲೀಸ್ ಯುನಿಫಾರ್ಮ ಹಾಕಿಕೊಂಡು ಸಿಒಡಿ ಕಾರವಾರದಿಂದ ಬಂದಿದ್ದೇನೆ ಎಂದು ಹೇಳಿಕೊಂಡು ನಗರದ ಶಾಂತಿಕಾ ಲ್ಯಾಬ್ಗೆ ಹೋಗಿ ಲ್ಯಾಬ್ ದಾಖಲಾತಿಗಳನ್ನು ತಾನು ತಂದ ಕ್ಯಾಮರಾದಿಂದ ಫೋಟೋ ಹೊಡೆದುಕೊಂಡು ಇನ್ನೊಂದು ಲ್ಯಾಬ್ ಪರಿಶೀಲನೆ ನಡೆಸಿ ಬರುವುದಾಗಿ ಸುಳ್ಳು ಹೇಳಿ ಮೋಸ ಮಾಡಿ ಹೋಗಿದ್ದಾಗಿ ಪ್ರಕರಣ ದಾಖಲಾಗಿತ್ತು.
ಆರೋಪಿಯು ದಾಖಲಾತಿ ಪರಿಶೀಲನೆ ನಡೆಸಿದ್ದು ಸಿಸಿಟಿವಿಯಲ್ಲಿ ದಾಖಲಾಗಿತ್ತು. ತಲೆಗೆ ಹೆಲ್ಮೆಟ್ ಧರಿಸಿದ್ದ ಕಾರಣ ಮುಖ ಚರಹೆ ಗುರುತು ಸಿಕ್ಕಿರಲಿಲ್ಲ. ಆದರೆ ಪೊಲೀಸರ ಚುರುಕು ಕಾರ್ಯಚರಣೆಯಿಂದ ಘಟನೆ ನಡೆದ ಮೂರು ದಿನಗಳೊಳಗೆ ಆರೋಪಿ ಸೆರೆ ಸಿಕ್ಕಿದ್ದು, ನ್ಯಾಯಾಲಯಕ್ಕೆ ಹಾಜಾರು ಪಡಿಸಲಾಗಿದೆ.
ಆರೋಪಿಯು ಇನ್ನಷ್ಟು ಲ್ಯಾಬ್ಗೆ ಹೋಗಿ ದಾಖಲಾತಿ ಸಂಗ್ರಹಿಸಿರುವ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ಪ್ರಕರಣದ ಉಳಿದ ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವೆಸಲಾಗಿದೆ. ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.