ಕಾರವಾರ: ಪ್ರೀತಿಯ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿ ಯುವತಿ ಗರ್ಭವತಿಯಾದ ಕೂಡಲೇ ಕೈಕೊಟ್ಟಿವುದಲ್ಲದೆ, ಆಕೆಗೆ ಜೀವ ಬೇದರಿಕೆ ಹಾಕಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬೊಬ್ರುವಾಡದ ನಿವಾಸಿ ಆಟೋ ಚಾಲಕ ಸಂಜಯ ಅಶೋಕ ನಾಯ್ಕ (24) ಬಂಧನಕ್ಕೊಳಗಾದ ಯುವಕ.
ಈತ ಕಳೆದ ಒಂದೂವರೆ ವರ್ಷದಿಂದ ಪರಿಶಿಷ್ಟ ಜಾತಿಯ ಯುವತಿಯೋರ್ವಳನ್ನು ಪ್ರೀತಿಸುವ ನಾಟಕವಾಡಿದ್ದಾನೆ ಎನ್ನಲಾಗ್ತಿದೆ. ಅಲ್ಲದೇ ಮದುವೆಯಾಗುವುದಾಗಿ ನಂಬಿಸಿ ಲಾಡ್ಜ್ಗೆ ಕರೆದುಕೊಂಡು ಹೋಗಿದ್ದ ಎಂಬ ಆರೋಪ ಕೇಳಿಬಂದಿದೆ. ಇದೇ ರೀತಿ ಹಲವು ಬಾರಿ ಯುವತಿಯನ್ನು ಬೇರೆ ಬೇರೆ ಕಡೆ ಕರೆದೊಯ್ದಿದ್ದಾನೆ ಎನ್ನಲಾಗ್ತಿದೆ. ಬಳಿಕ ಯುವತಿ ಗರ್ಭವತಿಯಾದ ನಂತರ ಮದುವೆಯಾಗುವಂತೆ ಕೇಳಿಕೊಂಡಾಗ ಯುವಕ ನಿರಾಕರಿಸಿದ್ದಾನೆ.
ಇದನ್ನೂ ಓದಿ: ಮದುವೆ ಆಗುವುದಾಗಿ ನಂಬಿಸಿ ಕೈ ಕೊಟ್ಟ ಪ್ರಿಯಕರನ ಮನೆ ಮುಂದೆ ಯುವತಿ ಧರಣಿ!
ಅಲ್ಲದೆ ಯಾರಿಗಾದರೂ ತನ್ನ ಹೆಸರು ಹೇಳಿದ್ರೆ, ಕೊಂದು ಬಿಡುವುದಾಗಿಯೂ ಬೇದರಿಕೆ ಹಾಕಿ ನಾಪತ್ತೆಯಾಗಿದ್ದ. ಹೀಗಾಗಿ ಯುವತಿ ಪೊಲೀಸರ ಮೊರೆ ಹೋಗಿ ಯುವಕನ ವಿರುದ್ಧ ದೂರು ನೀಡಿದ್ದಳು. ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವಕನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.