ಶಿರಸಿ: ರಾಜ್ಯ ಪ್ರಸಿದ್ಧ ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಸರ್ಕಾರ ವ್ಯವಸ್ಥಾಪನಾ ಸಮಿತಿಯನ್ನು ರಚನೆ ಮಾಡಬಾರದು ಎಂದು ಆಗ್ರಹಿಸಿ ಬಾಬುದಾರರು, ಭಕ್ತರು ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ದೇವಸ್ಥಾನದಿಂದ ಇಲ್ಲಿನ ಸಹಾಯಕ ಆಯುಕ್ತರ ಕಚೇರಿಯವರೆಗೆ ಮೌನ ಮೆರವಣಿಗೆಯ ಮೂಲಕ ಆಗಮಿಸಿದ ಭಕ್ತರು, ಬಾಬುದಾರರು, ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿ ರಚನೆ ಮಾಡುವ ಕುರಿತು ಪತ್ರಿಕೆಗಳಲ್ಲಿ ಜಾಹಿರಾತು ಪ್ರಕಟಣೆ ಬಂದಿರುತ್ತದೆ. ಆದರೆ, ದೇವಸ್ಥಾನ ಜಿಲ್ಲಾ ನ್ಯಾಯಾಧೀಶರ ಅಧೀನದಲ್ಲಿದ್ದು, ನ್ಯಾಯಾಧೀಶರು ಆಯ್ಕೆ ಮಾಡಿರುವ ಆಡಳಿತ ಮಂಡಳಿ ಮುನ್ನಡೆಸುತ್ತದೆ. ಆದ ಕಾರಣ ಈಗಿರುವ ಜಿಲ್ಲಾ ನ್ಯಾಯಾಧೀಶರ ಆಯ್ಕೆಯನ್ನು ಮುಂದುವರಸಬೇಕು ಎಂದು ಮನವಿ ಮಾಡಿದರು.
1955ರಿಂದಲೂ ಗೌರವಾನ್ವಿತ ನ್ಯಾಯಾಧೀಶರ ಆಡಳಿತ ನಿಯಂತ್ರಣಕ್ಕೆ ಒಳಪಟ್ಟಿದ್ದು, ಐದು ವರ್ಷಕ್ಕೊಮ್ಮೆ ಅವರು ಧರ್ಮದರ್ಶಿ ಮಂಡಳಿಯನ್ನು ಆಯ್ಕೆ ಮಾಡುತ್ತಾರೆ. ಆ ಧರ್ಮದರ್ಶಿ ಮಂಡಳಿ ದೇವಸ್ಥಾನವನ್ನು ಮುನ್ನಡೆಸಿಕೊಂಡು ಹೋಗುವ ಪದ್ಧತಿಯಿದ್ದು, ನಾವು ಬಾಬುದಾರರು ಧರ್ಮದರ್ಶಿ ಮಂಡಳಿಯೊಂದಿಗೆ ಸೇರಿಕೊಂಡು ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಬಂದಿರುತ್ತೇವೆ. ಅಲ್ಲದೇ, ಹಣಕಾಸು ವ್ಯವಹಾರವೂ ಧರ್ಮದರ್ಶಿ ಮಂಡಳಿಯಿಂದ ಪಾರದರ್ಶಕವಾಗಿ ನಡೆದುಕೊಂಡು ಬಂದಿದೆ. ಆದರೆ, ಈಗ ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿ ರಚನೆ ಬಗ್ಗೆ ಪತ್ರಿಕೆಯಲ್ಲಿ ಪ್ರಕಟಣೆ ಮಾಡಿದ್ದು, 3 ವರ್ಷದ ಬಗ್ಗೆ 9 ಜನ ಸದಸ್ಯರ ವ್ಯವಸ್ಥಾಪನಾ ಸಮಿತಿ ರಚನೆ ಶ್ರೀ ಮಾರಿಕಾಂಬಾ ದೇವಸ್ಥಾನದ ಆಡಳಿತಕ್ಕೆ ಸಮಂಜಸ ಆಗಿದ್ದು ಇರುವುದಿಲ್ಲ ಎನ್ನುವುದು ದೇವಸ್ಥಾನದ ಎಲ್ಲಾ ಬಾಬುದಾರರ ಹಾಗೂ ಭಕ್ತರ ಅಭಿಪ್ರಾಯ ಆಗಿದೆ. ಹಿಂದೆಯೂ ಸಹ ಎರಡು ಬಾರಿ ವ್ಯವಸ್ಥಾಪನಾ ಸಮಿತಿ ಬಗ್ಗೆ ಅರ್ಜಿ ಕರೆದು ನಂತರ ಹಿಂದಕ್ಕೆ ಪಡೆದ ದಾಖಲೆಯಿದೆ.ಆದ ಕಾರಣ ದೇವಸ್ಥಾನದ ಆಡಳಿತವನ್ನು ಈಗ ಇರುವ ಪದ್ಧತಿಯಂತೆ ಗೌರವಾನ್ವಿತ ಉತ್ತರ ಕನ್ನಡ ಜಿಲ್ಲಾ ನ್ಯಾಯಧೀಶರ ಆಡಳಿತ ನಿಯಂತ್ರಣದಲ್ಲಿಯೇ ಈ ದೇವಸ್ಥಾನ ಇರಬೇಕು ಹಾಗೂ ವ್ಯವಸ್ಥಾಪನಾ ಸಮಿತಿ ರಚನೆ ವಿಷಯವನ್ನು ಕೈ ಬಿಡಬೇಕು ಎಂದು ಮನವಿಯಲ್ಲಿ ವಿನಂತಿಸಿಕೊಂಡಿದ್ದಾರೆ.
ಕೊರೋನಾ ಎಫೆಕ್ಟ್!:
ಬಾಬುದಾರರು ಮತ್ತು ಭಕ್ತರ ಮೆರವಣಿಗೆಗೆ ಕೊರೋನಾ ಭೀತಿ ಕಾಡಿತು ಎನ್ನಲಾಗಿದೆ. ಮೌನ ಮೆರವಣಿಗೆಯಾದರೂ ನೂರಕ್ಕೂ ಅಧಿಕ ಜನರು ಇದ್ದ ಕಾರಣ ಪೊಲೀಸರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ನಂತರ ಹತ್ತು ಜನರ ಗುಂಪುಗಳನ್ನು ಮಾಡಿಕೊಂಡು ಆಯುಕ್ತರ ಕಚೇರಿಗೆ ಆಗಮಿಸಿ, ದೇವಸ್ಥಾನದ ಪ್ರಮುಖ ನಾಲ್ಕಾರು ಬಾಬುದಾರರು ಮನವಿ ನೀಡಿದರು.